ನವದೆಹಲಿ: ಬಾಂಗ್ಲಾ ಬಿಕ್ಕಟ್ಟಿನ ಬಳಿಕ ಹಂಗಾಮಿ ಪ್ರಧಾನಿಯಾಗಿರುವ ಶಾಂತಿ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಭಾರತ ವಿರೋಧಿ ಮನಸ್ಥಿತಿ ಹಾಗೂ ಅದಾನಿ ಕಂಪನಿ ವಿರುದ್ಧ ಮಾತನಾಡುತ್ತಿದ್ದರು. ಇದರ ಬೆನ್ನಲ್ಲೇ ಅದಾನಿ ಗ್ರೂಪ್ ಬಾಕಿ ಉಳಿಸಿಕೊಂಡಿರುವ ಹಣವನ್ನು ಪಾವತಿಸುವಂತೆ ಗಡುವು ನೀಡಿದ್ದು ಅಲ್ಲದೆ ವಿದ್ಯುತ್ ಪೂರೈಕೆಯನ್ನು ಅರ್ಧಕ್ಕೆ ಇಳಿಸಿತು. ಇದರಿಂದ ಎಚ್ಚೆತ್ತ ಬಾಂಗ್ಲಾದೇಶ ಇದೀಗ ಗಡುವಿಗೂ ಮುನ್ನವೇ ಪಾವತಿಯನ್ನು ಆರಂಭಿಸಿದೆ.
ಅದಾನಿ ಗ್ರೂಪ್ ನ ಅದಾನಿ ಪವರ್ ಜಾರ್ಖಂಡ್ ಲಿಮಿಟೆಡ್ ಬಾಂಗ್ಲಾದೇಶಕ್ಕೆ ವಿದ್ಯುತ್ ಮಾರಾಟ ಮಾಡುತ್ತಿದೆ. ಈ ವಿದ್ಯುತ್ ಅನ್ನು ಜಾರ್ಖಂಡ್‌ನ ಗೊಡ್ಡಾದಲ್ಲಿ ಉತ್ಪಾದಿಸಲಾಗುತ್ತದೆ. ಬಾಂಗ್ಲಾದೇಶದ ದಂಗೆಯ ನಂತರ ಅದಾನಿ ಪವರ್ ಪಾವತಿ ಸಮಸ್ಯೆಗಳನ್ನು ಎದುರಿಸಿತ್ತು. ಹೀಗಾಗಿ ಅದಾನಿ ಗ್ರೂಪ್ ಬಾಂಗ್ಲಾಗೆ ಎಚ್ಚರಿಕೆ ರವಾನಿಸಿತ್ತು.
ಅದಾನಿ ಪವರ್ ಜಾರ್ಖಂಡ್‌ನಲ್ಲಿರುವ ತನ್ನ ಸ್ಥಾವರದಿಂದ 1,600 ಮೆಗಾವ್ಯಾಟ್ (MW) ವಿದ್ಯುತ್ ಅನ್ನು ಬಾಂಗ್ಲಾದೇಶಕ್ಕೆ ರಫ್ತು ಮಾಡುತ್ತದೆ. ಬಾಕಿ ಮೊತ್ತವನ್ನು ಪಾವತಿಸಲು ನವೆಂಬರ್ 7ರ ಗಡುವನ್ನು ನಿಗದಿಪಡಿಸಲಾಗಿತ್ತು. ಕಂಪನಿಯು ಆಮದು ಮಾಡಿಕೊಂಡ ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದಿಸುವುದರಿಂದ ಹಣ ಪಾವತಿಯಾಗದ ಕಾರಣ ಕಲ್ಲಿದ್ದಲು ಪೂರೈಕೆಯಲ್ಲಿ ಸವಾಲು ಎದುರಿಸುತ್ತಿದೆ.
ಗೌತಮ್ ಅದಾನಿ ಒಡೆತನದ ಕಂಪನಿಯು ಬಾಂಗ್ಲಾದೇಶಕ್ಕೆ ಈ ತಿಂಗಳು ಸುಮಾರು 1,400 ಮೆಗಾವ್ಯಾಟ್‌ನಿಂದ 700-800 ಮೆಗಾವ್ಯಾಟ್‌ಗೆ ವಿದ್ಯುತ್ ಪೂರೈಕೆಯನ್ನು ಕಡಿಮೆ ಮಾಡಿದೆ ಎಂದು ಬಾಂಗ್ಲಾದೇಶ ವಿದ್ಯುತ್ ಅಭಿವೃದ್ಧಿ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಿಂದಾಗಿ ಸುಗಮ ಗೃಹ ವಿದ್ಯುತ್ ಪೂರೈಕೆಗೆ ತೊಂದರೆಯಾಗುತ್ತಿದೆ.
2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದಾಗಿನಿಂದ, ಇಂಧನ ಮಾರುಕಟ್ಟೆಯು ವೇಗವನ್ನು ಪಡೆದುಕೊಂಡಿದೆ. ಇದರೊಂದಿಗೆ ಬಾಂಗ್ಲಾದೇಶದ ಆಮದು ಬಿಲ್ ಕೂಡ ಹೆಚ್ಚಾಗಿದೆ. ಇದರಿಂದಾಗಿ ಅವರು ಬಿಲ್ ಪಾವತಿಸಲು ಪರದಾಡುತ್ತಿದ್ದಾರೆ. ಆಗಸ್ಟ್‌ನಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಲು ಕಾರಣವಾದ ರಾಜಕೀಯ ಪ್ರಕ್ಷುಬ್ಧತೆಯೂ ಅದರ ತೊಂದರೆಗಳನ್ನು ಹೆಚ್ಚಿಸಿತ್ತು.
ಕಳೆದ ತಿಂಗಳು ನಾವು 96 ಮಿಲಿಯನ್ ಡಾಲರ್ ಪಾವತಿಸಿದ್ದೇವೆ. ಈ ತಿಂಗಳು ಹೆಚ್ಚುವರಿ 170 ಮಿಲಿಯನ್ ಡಾಲರ್ ಸಾಲದ ಪತ್ರವನ್ನು ತೆರೆಯಲಾಗಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ವಿದ್ಯುತ್ ಮತ್ತು ಇಂಧನ ಸಲಹೆಗಾರ ಮೊಹಮ್ಮದ್ ಫೌಜುಲ್ ಕಬೀರ್ ಖಾನ್ ತಿಳಿಸಿದರು. ಇನ್ನು ಅದಾನಿ ಗ್ರೂಪ್ ಬಾಂಗ್ಲಾದೇಶಕ್ಕೆ ಸುಮಾರು ಶೇಕಡ 27ರಷ್ಟು ಹೆಚ್ಚಿನ ದರಗಳನ್ನು ವಿಧಿಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಬಾಂಗ್ಲಾದೇಶವು ಅದಾನಿ ಪವರ್‌ನೊಂದಿಗಿನ ಒಪ್ಪಂದದ ಬಗ್ಗೆ ತನಿಖೆ ನಡೆಸುತ್ತಿದೆ.
Advertisement