ಮುಂಬೈ: ಭಾರತೀಯ ಷೇರುಮಾರುಕಟ್ಟೆ ಮೇಲೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಪರಿಣಾಮ ಬೀರಿದ್ದು, ಸತತ 2 ದಿನಗಳ ಕಾಲ ಏರಿಕೆಯಲ್ಲಿದ್ದ ಷೇರುಮಾರುಕಟ್ಟೆ ಗುರುವಾರ ಭಾರಿ ಪ್ರಮಾಣದಲ್ಲಿ ಕುಸಿದಿದೆ.
ಹೌದು.. ಅತ್ತ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಕ್ತಾಯದ ಬೆನ್ನಲ್ಲೇ ಇಂದು ಭಾರತೀಯ ಷೇರುಮಾರುಕಟ್ಟೆ ಭಾರಿ ಪ್ರಮಾಣದಲ್ಲಿ ಕುಸಿದಿದ್ದು, ಸೆನ್ಸೆಕ್ಸ್ 836.34 ಅಂಕಗಳಷ್ಟು ಕುಸಿದು 79,541.79 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಅಂತೆಯೇ ನಿಫ್ಟಿ ಕೂಡ 284.70 ಅಂಕ ಕುಸಿದು 24,199.35 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟಾರೆ ಶೇ.1.04ರಷ್ಟು ಮತ್ತು ನಿಫ್ಟಿ ಶೇ.1.16ರಷ್ಟು ಕುಸಿತಗೊಂಡಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿಮಾಡಲಾದ ಸಂಸ್ಥೆಗಳ ಪೈಕಿ ಟಾಟಾ ಮೋಟಾರ್ಸ್, ಟೆಕ್ ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ಜೆಎಸ್‌ಡಬ್ಲ್ಯೂ ಸ್ಟೀಲ್, ಸನ್ ಫಾರ್ಮಾ, ಏಷ್ಯನ್ ಪೇಂಟ್ಸ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ನಷ್ಟ ಅನುಭವಿಸಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಾಭಾಂಶ ಕಂಡಿದೆ.
ಮಾರುಕಟ್ಟೆ ಮೇಲೆ ಅಮೆರಿಕ ಚುನಾವಣೆ ಪರಿಣಾಮ
ಇನ್ನು ಭಾರತೀಯ ಷೇರುಮಾರುಕಟ್ಟೆ ಮೇಲೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಪರಿಣಾಮ ಬೀರಿದ್ದು, ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವಿನ ಪೈಪೋಟಿ ಇಡೀ ಜಗತ್ತಿನ ಗಮನ ಸೆಳೆದಿತ್ತು. ಇದೀಗ ಅಮೆರಿಕದಲ್ಲಿ ಸರ್ಕಾರ ಬದಲಾಗಿದ್ದು, ಹೂಡಿಕೆದಾರರು ಈಗ ಬಡ್ಡಿದರದ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಫೆಡರಲ್ ರಿಸರ್ವ್‌ನ ಮುಂಬರುವ ದರ ನಿರ್ಧಾರದ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದಾರೆ.
Advertisement