ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸತತ 4ನೇ ದಿನವೂ ರೂಪಾಯಿ ಮೌಲ್ಯ ಕುಸಿದಿದ್ದು, ಸೋಮವಾರ ರೂಪಾಯಿ ಮೌಲ್ಯ 2 ಪೈಸೆಯಷ್ಟು ಕುಸಿದು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಕುಸಿದಿದೆ.
ಕಳೆದ ಶುಕ್ರವಾರ ಮಾರುಕಟ್ಟೆ ವಹಿವಾಟು ಅಂತ್ಯದ ವೇಳೆಗೆ 5 ಪೈಸೆಯಷ್ಟು ಕುಸಿದು 84.37ರೂಗೆ ತಲುಪಿದ್ದ ರೂಪಾಯಿ ಮೌಲ್ಯ ಇಂದು ಮತ್ತೆ 2 ಪೈಸೆಯಷ್ಟು ಕುಸಿದು ಸಾರ್ವಕಾಲಿಕ ಗರಿಷ್ಠ ಮಟ್ಟ 84.39 ರೂ ಗೆ ಇಳಿಕೆಯಾಗಿದೆ.
ನಿರಂತರ ವಿದೇಶಿ ನಿಧಿಯ ಹೊರಹರಿವು ಮತ್ತು ದೇಶೀಯ ಷೇರುಗಳಲ್ಲಿನ ನೀರಸ ವಹಿವಾಟು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.
ಡಾಲರ್ ಸೂಚ್ಯಂಕದಲ್ಲಿ ಮೃದುತ್ವ ಅಥವಾ ವಿದೇಶಿ ನಿಧಿಯ ಹೊರಹರಿವು ನಿಧಾನವಾಗದ ಹೊರತು ರೂಪಾಯಿ ಮೌಲ್ಯವು ಒತ್ತಡದಲ್ಲಿ ಉಳಿಯುವ ಸಾಧ್ಯತೆಯಿದೆ ಎಂದು ಫಾರೆಕ್ಸ್ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಇಂದು ಬೆಳಗ್ಗೆ ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಡಾಲರ್ ಎದುರು ರೂಪಾಯಿ 84.38 ರೂನೊಂದಿಗೆ ವಹಿವಾಟು ಪ್ರಾರಂಭಿಸಿತ್ತು. ಆದರೆ ವಹಿವಾಟು ಅಂತ್ಯದ ಹೊತ್ತಿಗೆ 2ಪೈಸೆ ಇಳಿಕೆಯಾಗಿ ಸಾರ್ವಕಾಲಿಕ 84.39 ರೂ ಗೆ ಇಳಿಕೆಯಾಗಿದೆ.
ಕಳೆದ ಬುಧವಾರದಿಂದಲೂ ರೂಪಾಯಿ ಮೌಲ್ಯ ಸತತವಾಗಿ ಇಳಿಕೆಯಾಗುತ್ತಾ ಸಾಗಿದೆ. ಈ ಅವಧಿಯಲ್ಲಿ ರೂಪಾಯಿ ಮೌಲ್ಯ 30 ಪೈಸೆಯಷ್ಟು ಇಳಿಕೆಯಾಗಿದೆ.
Advertisement