
ಮುಂಬೈ: ಭಾರತೀಯ ಷೇರುಮಾರುಕಟ್ಟೆಯ ಏರಿಳಿತದ ನಡುವೆಯೇ ಭಾರತದ ವಿದೇಶೀ ವಿನಿಮಯ ಮೀಸಲು ಹೊಸ ದಾಖಲೆ ಬರೆದಿದ್ದು, 700 ಬಿಲಿಯನ್ ಡಾಲರ್ ಗಡಿ ದಾಟಿದೆ.
ಹೌದು.. ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 27 ರಂದು ಕೊನೆಗೊಂಡ ವಾರದಲ್ಲಿ, ಭಾರತದ ವಿದೇಶಿ ವಿನಿಮಯ ಮೀಸಲು 12.588 ಶತಕೋಟಿ ಡಾಲರ್ ಏರಿಕೆಯೊಂದಿಗೆ 704.885 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ.
ಕಳೆದ ವಾರ ಈ ಪ್ರಮಾಣ 692.296 ಬಿಲಿಯನ್ ಡಾಲರ್ ಆಗಿತ್ತು. ವಿದೇಶಿ ವಿನಿಮಯ ಮೀಸಲುಗಳ ಈ ಪ್ರಮಾಣ ದೇಶೀಯ ಆರ್ಥಿಕ ಚಟುವಟಿಕೆಯನ್ನು ಜಾಗತಿಕ ಆಘಾತಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.
ಆರ್ ಬಿಐನ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದ ವಿದೇಶಿ ಕರೆನ್ಸಿ ಆಸ್ತಿಗಳು (foreign currency assets), ವಿದೇಶೀ ವಿನಿಮಯ ಮೀಸಲು(forex reserves)ಗಳ ಪ್ರಮಾಣ 616.154 ಶತಕೋಟಿ ಡಾಲರ್ ನಷ್ಟಿದೆ.
ಶುಕ್ರವಾರದ ಮಾಹಿತಿಯ ಪ್ರಕಾರ ಚಿನ್ನದ ನಿಕ್ಷೇಪಗಳು ಪ್ರಸ್ತುತ 65.796 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ. ಅಂದಾಜಿನ ಪ್ರಕಾರ, ಭಾರತದ ವಿದೇಶಿ ವಿನಿಮಯ ಮೀಸಲು ಈಗ ಒಂದು ವರ್ಷದ ಯೋಜಿತ ಆಮದು (imports)ಗಳನ್ನು ಸರಿದೂಗಿಸಲು ಸಾಕಾಗುತ್ತದೆ ಎಂದು ಹೇಳಲಾಗಿದೆ.
Advertisement