ಮುಂಬೈ: ಭಾರತೀಯ ಷೇರುಮಾರುಕಟ್ಟೆಯಲ್ಲಿ ಕರಡಿ ಓಟ ಮುಂದುವರೆದಿದ್ದು, ಇಂದು ಕೂಡ Sensex ಮತ್ತು Nifty ಸೂಚ್ಯಂಕಗಳು ಕುಸಿತ ಕಂಡಿವೆ.
ಭಾರತೀಯ ಷೇರುಮಾರುಕಟ್ಟೆ ಕುಸಿತದೊಂದಿಗೆ ವಾರಾಂತ್ಯದ ವಹಿವಾಟು ಕೊನೆಗೊಳಿಸಿದ್ದು, ಸೆನ್ಸೆಕ್ಸ್ 808.65 ಅಂಕಗಳ ಕುಸಿತದೊಂದಿಗೆ 81,688.45 ಅಂಕಗಳಿಗೆ ಕುಸಿದು ವಾರದ ವಹಿವಾಟು ಅಂತ್ಯಗೊಳಿಸಿದೆ. ಅಂತೆಯೇ ನಿಫ್ಟಿ ಕೂಡ 235.50 ಅಂಕಗಳ ಕುಸಿತಗೊಂಡು 25,014.60 ಅಂಕಗಳಿಗೆ ಕುಸಿದು ಇಂದಿನ ವಹಿವಾಟು ಅಂತ್ಯಗೊಳಿಸಿದೆ.
ಇಂದು ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಶೇ.1ರಷ್ಟು ಕುಸಿತಗೊಂಡಿದ್ದು, FMCG ವಲಯದಲ್ಲಿನ ಷೇರುಗಳ ಮಾರಾಟ ತೀವ್ರತೆ ಇಂದಿನ ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. ಇದಲ್ಲದೆ ಆಟೋ ಮೊಬೈಲ್, ಇಂಧನ ವಲಯದ ಷೇರುಗಳ ಮೌಲ್ಯ ಕುಸಿತ ಕೂಡ ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ನಿರಂತರ ವಿದೇಶಿ ಬಂಡವಾಳದ ಹೊರಹರಿವು ಕೂಡ ಭಾರತೀಯ ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಇದಲ್ಲದೇ, ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಇಂಧನ ಪೂರೈಕೆ ಅನಿಶ್ಚಿತತೆಯ ಮೇಲೆ ಜಾಗತಿಕ ಕಚ್ಚಾ ಬೆಲೆಯಲ್ಲಿನ ಏರಿಕೆಯು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಂದಿನ ವಹಿವಾಟಿನಲ್ಲಿ ಮಹಿಂದ್ರಾ ಮತ್ತು ಮಹಿಂದ್ರಾ, ಬಜಾಜ್ ಫೈನಾನ್ಸ್ ಸಂಸ್ಥೆಗಳ ಷೇರುಗಳ ಮೌಲ್ಯ ಶೇ.3ರಷ್ಟು ಕುಸಿದಿದ್ದು, ನೆಸ್ಲೆ ಇಂಡಿಯಾ, ಏಷ್ಯನ್ ಪೇಯಿಂಟ್ಸ್ ಮತ್ತು ಭಾರ್ತಿ ಏರ್ಟೆಲ್ ಸಂಸ್ಥೆಗಳ ಷೇರುಗಳ ಮೌಲ್ಯ ಶೇ.2 ರಿಂದ ಶೇ.2.85ರವರೆಗೂ ಕುಸಿದಿದೆ.
Advertisement