Indian Stock Market: ಅಲ್ಪ ಚೇತರಿಕೆ ಕಂಡ Sensex, Nifty; ಬ್ಯಾಂಕಿಂಗ್, ಮೆಟಲ್ ಸ್ಟಾಕ್ ಗಳಿಗೆ ಲಾಭ!
ಮುಂಬೈ: ಕುಸಿತದ ಹಾದಿಯಲ್ಲಿದ್ದ ಭಾರತೀಯ ಷೇರುಮಾರುಕಟ್ಟೆ ಗುರುವಾರ ಅಲ್ಪ ಪ್ರಮಾಣದ ಚೇತರಿಕೆ ಕಂಡಿದ್ದು, ಬ್ಯಾಂಕಿಂಗ್, ಮೆಟಲ್ ವಲಯದ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.
ನಿನ್ನೆ ಅಲ್ಪ ಪ್ರಮಾಣದ ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಅಲ್ಪ ಪ್ರಮಾಣದ ಏರಿಕೆಯಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಸೆನ್ಸೆಕ್ಸ್ 144.30 ಅಂಕಗಳ ಏರಿಕೆಯೊಂದಿಗೆ 81,611.41 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಅಂತೆಯೇ ನಿಫ್ಟಿ ಕೂಡ 16.50 ಅಂಕಗಳ ಏರಿಕೆಯೊಂದಿಗೆ 24,998.45 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
Q2FY25 ವರದಿ ನಿರೀಕ್ಷೆ
ಇನ್ನು ದೇಶದ ಪ್ರಮುಖ ಸಂಸ್ಥೆಗಳು ವಿತ್ತೀಯ ವರ್ಷ 2025ರ 2ನೇ ತ್ರೈಮಾಸಿಕ ವರದಿ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಇದು ಮಾರುಕಟ್ಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್ ಸಂಸ್ಥೆಯ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಅಭಿಪ್ರಾಯಪಟ್ಟಿದ್ದಾರೆ.
ಅಂತೆಯೇ ಚೀನಾ ಸರ್ಕಾರದ ಹೊಸ ನೀತಿಗಳು ಮತ್ತು ಆ ದೇಶದಲ್ಲಿ ಸರ್ಕಾರ ಕೈಗೆತ್ತಿಕೊಂಡಿರುವ ಹೊಸ ಯೋಜನೆಗಳು ಮುಂದಿನ ದಿನಗಳಲ್ಲಿ ಉಕ್ಕಿಗೆ ವ್ಯಾಪಕ ಬೇಡಿಕೆ ಏರ್ಪಡುವಂತೆ ಮಾಡಿದೆ. ಹೀಗಾಗಿ ಮೆಟಲ್ ಸ್ಟಾಕ್ ಗಳ ಮೌಲ್ಯ ಏರಿಕೆಯಾಗುವ ಸಾಧ್ಯತೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಆರ್ ಬಿಐನ ಇತ್ತೀಚಿನ ರೆಪೋ ದರ ಏರಿಸದೇ ಇರುವ ನಿಲುವು ಬ್ಯಾಂಕಿಂಗ್ ವಲಯದ ಷೇರುಗಳ ಮೌಲ್ಯ ಏರಿಕೆಗೆ ಕಾರಣ ಎನ್ನಲಾಗಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇನ್ನು ಇಂದಿನ ವಹಿವಾಟಿನಲ್ಲಿ ನಿಫ್ಟಿಯ ಲಿಸ್ಟೆಡ್ ಸಂಸ್ಥೆಗಳಾದ ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಭಾರತ್ ಎಲೆಕ್ಟ್ರಾನಿಕ್ಸ್, ಮಾರುತಿ ಸುಜುಕಿ ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಸಂಸ್ಥೆಗಳ ಷೇರುಗಳು ಲಾಭಾಂಶ ಕಂಡಿದ್ದು, ಸಿಪ್ಲಾ, ಟ್ರೆಂಟ್, ಟೆಕ್ ಮಹೀಂದ್ರಾ, ಸನ್ ಫಾರ್ಮಾ ಮತ್ತು ಹೀರೋ ಮೋಟೋಕಾರ್ಪ್ ಸಂಸ್ಥೆಗಳ ಷೇರುಗಳ ಮೌಲ್ಯ ಕುಸಿದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ