ಮುಂಬೈ: ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ಅಲ್ಪ ಇಳಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ್ದು, ದಾಖಲೆಯ 85 ಸಾವಿರ ಗಡಿ ದಾಟಿದ್ದ ಸೆನ್ಸೆಕ್ಸ್ 14.57 ಅಂಕಗಳ ಕುಸಿತದೊಂದಿಗೆ 84,914.04 ಅಂಶಗಳಿಗೆ ಕುಸಿದು ಇಂದು ವಹಿವಾಟು ಅಂತ್ಯಗೊಳಿಸಿದೆ.
ಇಂದು ವಹಿವಾಟು ಆರಂಭವಾಗುತ್ತಿದ್ದಂತೆಯೇ 234.62 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 85 ಸಾವಿರ ಗಡಿ ದಾಟಿತ್ತು. ಆ ಮೂಲಕ 85,163.23. ಅಂಕಗಳಿಗೆ ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು. ಆದರೆ ದಿನದ ವಹಿವಾಟು ಅಂತ್ಯದ ವೇಳೆಗೆ 84,914.04 ಅಂಕಗಳಿಗೆ ಕುಸಿದು ವಹಿವಾಟು ಅಂತ್ಯಗೊಳಿಸಿದೆ.
ಇದಕ್ಕೆ ವ್ಯತಿರಿಕ್ತ ಎಂಬಂತೆ ಇಂದು ನಿಫ್ಟಿ ಅಲ್ಪ ಏರಿಕೆ ಕಂಡಿದ್ದು, ಆರಂಭಿಕ ವಹಿವಾಟಿನಲ್ಲಿ 72.5 ಅಂಕಗಳ ಏರಿಕೆಯೊಂದಿಗೆ 26,011.55. ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು. ಬಳಿಕ 25,940.40 ಅಂಕಗಳಿಗೆ ಕುಸಿದು ಕೇವಲ 1.35 ಅಂಕಗಳು ಮಾತ್ರ ಏರಿಕೆ ಕಂಡು ವಹಿವಾಟು ಅಂತ್ಯಗೊಳಿಸಿದೆ.
ಚೀನಾ ಹೊರತಂದಿರುವ ವಿತ್ತೀಯ ನೀತಿಗಳು ಇಂದಿನ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಪ್ರಮುಖವಾಗಿ ಅದರ ಮೆಟಲ್ ಇಂಡಸ್ಟ್ರಿ ಮಾರುಕಟ್ಟೆ ಮತ್ತು ಷೇರುಗಳ ಮೌಲ್ಯ ಏರಿಕೆಯಾಗುವಂತೆ ಮಾಡಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ FMCG ಮತ್ತು ಬ್ಯಾಂಕಿಂಗ್ ವಿಭಾಗದ ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದ್ದು, ಇಂಧನ ಮತ್ತು ಮೆಟಲ್ ವಿಭಾಗದ ಶೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.
ಉಳಿದಂತೆ ಟಾಟಾ ಸ್ಟೀಲ್, ಹಿಂಡಾಲ್ಕೊ ಇಂಡಸ್ಟ್ರೀಸ್, ಪವರ್ ಗ್ರಿಡ್ ಕಾರ್ಪ್, ಟೆಕ್ ಮಹೀಂದ್ರಾ ಮತ್ತು ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆಗಳ ಷೇರುಗಳ ಲಾಭಾಂಶ ಕಂಡರೆ, SBI ಲೈಫ್ ಇನ್ಶುರೆನ್ಸ್, HUL, ಗ್ರಾಸಿಮ್ ಇಂಡಸ್ಟ್ರೀಸ್, ಅಲ್ಟ್ರಾಟೆಕ್ ಸಿಮೆಂಟ್, ಹಿಂದೂಸ್ತಾನ್ ಯೂನಿಲಿವರ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಮತ್ತು ಶ್ರೀರಾಮ್ ಫೈನಾನ್ಸ್ ಸಂಸ್ಥೆಗಳ ಷೇರುಗಳ ಮೌಲ್ಯ ಕುಸಿದಿದೆ.
Advertisement