
ನವದೆಹಲಿ: ಮಹಿಳೆಯೊಬ್ಬರಿಗೆ ನೈರ್ಮಲ್ಯವಿಲ್ಲದ ಮತ್ತು ಕಲೆಯಾದ ಸೀಟನ್ನು ನೀಡಿದ್ದ ಇಂಡಿಗೋ ಏರ್‌ಲೈನ್ಸ್ ಅನ್ನು ಸೇವಾ ಕೊರತೆಯ ದೋಷಿ ಎಂದು ದೆಹಲಿ ಗ್ರಾಹಕ ವೇದಿಕೆ ತೀರ್ಪು ನೀಡಿದ್ದು, ಆಕೆ ಅನುಭವಿಸಿದ ಅಸ್ವಸ್ಥತೆ, ನೋವು ಮತ್ತು ಮಾನಸಿಕ ಯಾತನೆಗೆ 1.5 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ಈ ವರ್ಷದ ಜನವರಿ 2 ರಂದು ಬಾಕುದಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ 'ಅನೈರ್ಮಲ್ಯ, ಕೊಳಕು ಮತ್ತು ಕಲೆಯಾದ' ಸೀಟನ್ನು ನೀಡಲಾಗಿದೆ ಎಂದು ಆರೋಪಿಸಿ ಪಿಂಕಿ ಎಂಬುವವರು ದೂರು ಸಲ್ಲಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ ಅಧ್ಯಕ್ಷೆ ಪೂನಂ ಚೌಧರಿ ಮತ್ತು ಸದಸ್ಯರಾದ ಬರಿಕ್ ಅಹ್ಮದ್ ಮತ್ತು ಶೇಖರ್ ಚಂದ್ರ ಅವರನ್ನೊಳಗೊಂಡ ನವದೆಹಲಿ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗ ಈ ತೀರ್ಪು ನೀಡಿದೆ.
ಈ ವಿಷಯದ ಕುರಿತು ನಾನು ನೀಡಿದ ದೂರನ್ನು ಏರ್‌ಲೈನ್ಸ್ 'ತಿರಸ್ಕಾರ ಮತ್ತು ಸೂಕ್ಷ್ಮವಲ್ಲದ ರೀತಿಯಲ್ಲಿ' ಪರಿಗಣಿಸಿದೆ ಎಂದು ಪಿಂಕಿ ಆರೋಪಿಸಿದ್ದಾರೆ.
ಈ ಆರೋಪಕ್ಕೆ ಪ್ರತಿಯಾಗಿ, ಪಿಂಕಿ ಅವರಿಗೆ ಬೇರೆ ಸೀಟನ್ನು ನಿಗದಿಪಡಿಸಲಾಗಿತ್ತು. ಆದರೆ, ಅವರೇ ಸ್ವಇಚ್ಛೆಯಿಂದ ನವದೆಹಲಿಗೆ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಪುರಾವೆಗಳನ್ನು ಗಮನಿಸಿದ ವೇದಿಕೆ, 'ಸೇವೆಯಲ್ಲಿನ ಕೊರತೆಯಿಂದಾಗಿ ಎದುರು ಪಕ್ಷ (ಇಂಡಿಗೋ) ತಪ್ಪಿತಸ್ಥರೆಂದು ನಾವು ಭಾವಿಸುತ್ತೇವೆ. ಆಕೆ ಅನುಭವಿಸಿದ ಅಸ್ವಸ್ಥತೆ ಮತ್ತು ನೋವು, ಮಾನಸಿಕ ಯಾತನೆಗೆ ಸಂಬಂಧಿಸಿದಂತೆ, ಆಕೆಗೆ ಪರಿಹಾರ ನೀಡಬೇಕು ಎಂದು ನಾವು ಭಾವಿಸುತ್ತೇವೆ. ಅದಕ್ಕೆ ಅನುಗುಣವಾಗಿ, ವಿಮಾನಯಾನ ಸಂಸ್ಥೆಯು 1.5 ಲಕ್ಷ ರೂ.ಗಳನ್ನು ಪಾವತಿಸಲು ನಾವು ನಿರ್ದೇಶಿಸುತ್ತೇವೆ' ಎಂದು ಜುಲೈ 9 ರಂದು ಬಿಡುಗಡೆಯಾದ ಆದೇಶದಲ್ಲಿ ವೇದಿಕೆ ತಿಳಿಸಿದೆ.
ಅಲ್ಲದೆ, ಮೊಕದ್ದಮೆ ವೆಚ್ಚವಾಗಿ 25,000 ರೂ.ಗಳನ್ನು ಪಾವತಿಸಲು ನಿರ್ದೇಶಿಸಿದೆ.
ವಿಮಾನಯಾನ ಸಂಸ್ಥೆಗಳು ಪರಿಸ್ಥಿತಿ ದತ್ತಾಂಶ ಪ್ರದರ್ಶನ (SDD) ವರದಿಯನ್ನು ಸಲ್ಲಿಸುವಲ್ಲಿ ವಿಫಲವಾಗಿವೆ ಎಂದು ವೇದಿಕೆ ತನ್ನ ಆದೇಶದಲ್ಲಿ ತಿಳಿಸಿದೆ. ಇದು ಪ್ರಮಾಣಿತ ವಾಯುಯಾನ ಪ್ರೋಟೋಕಾಲ್‌ಗಳ ಪ್ರಕಾರ ಅದರ ಆಂತರಿಕ ಕಾರ್ಯಾಚರಣೆಯ ದಾಖಲೆಗಳ ಭಾಗವಾಗಿದೆ.
'ವಿರುದ್ಧ ಪಕ್ಷವು ಸಲ್ಲಿಸಿದ ಸಾಕ್ಷ್ಯಗಳಲ್ಲಿ ಈ ವರದಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. SDD ವಿಮಾನ ಕಾರ್ಯಾಚರಣೆಯ ಮೇಲ್ವಿಚಾರಣೆಗೆ ಮತ್ತು ಪ್ರಯಾಣಿಕರಿಗೆ ಸಂಬಂಧಿಸಿದ ಘಟನೆಗಳನ್ನು ದಾಖಲಿಸಲು ಬಳಸುವ ನಿರ್ಣಾಯಕ ದಾಖಲೆಯಾಗಿದೆ. ಈ ದಾಖಲೆಯ ಅನುಪಸ್ಥಿತಿಯು ವಿರುದ್ಧ ಪಕ್ಷದ ರಕ್ಷಣೆಯನ್ನು ಗಮನಾರ್ಹವಾಗಿ ದುರ್ಬಲಗೊಳಿಸುತ್ತದೆ' ಎಂದು ಅದು ಹೇಳಿದೆ.
Advertisement