
ಮುಂಬೈ: ಭಾರತೀಯ ಷೇರುಮಾರುಕಟ್ಟೆಯ ಕುಸಿತ ಮಂಗಳವಾರವೂ ಮುಂದುವರೆದಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳು ಶೇ.1ರಷ್ಟು ಕುಸಿತಗೊಂಡು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಮಂಗಳವಾರ ಭಾರತೀಯ ಷೇರುಮಾರುಕಟ್ಟೆ ಭಾರಿ ಪ್ರಮಾಣದ ಕುಸಿತ ಕಂಡಿದ್ದು, ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.1.04ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.02ರಷ್ಟು ಕುಸಿತ ದಾಖಲಿಸಿದೆ.
ಸೆನ್ಸೆಕ್ಸ್ ಇಂದು ಬರೊಬ್ಬರಿ 849.37ಅಂಕಗಳ ಇಳಿಕೆಯೊಂದಿಗೆ 80,786.54 ಅಂಕಗಳಿಗೆ ಕುಸಿತವಾಗಿದ್ದರೆ, ನಿಫ್ಟಿ 255.70 ಅಂಕಗಳ ಇಳಿಕೆಯೊಂದಿಗೆ 24,712.05 ಅಂಕಗಳಿಗೆ ಕುಸಿತವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಐಟಿ, ಬಂಡವಾಳ ಸರಕುಗಳು ಸೇರಿದಂತೆ ಬಹುತೇಕ ಎಲ್ಲ ವಲಯಗಳ ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಸನ್ ಫಾರ್ಮಾಸ್ಯುಟಿಕಲ್, ಟಾಟಾ ಸ್ಟೀಲ್, ಟ್ರೆಂಟ್, ಬಜಾಜ್ ಫೈನಾನ್ಸ್, ಮಹೀಂದ್ರಾ & ಮಹೀಂದ್ರಾ, ಬಜಾಜ್ ಫಿನ್‌ಸರ್ವ್, ರಿಲಯನ್ಸ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್, ಟೆಕ್ ಮಹೀಂದ್ರಾ, ಅದಾನಿ ಪೋರ್ಟ್ಸ್, ಟೈಟಾನ್, ಬಿಇಎಲ್, ಮತ್ತು ಲಾರ್ಸೆನ್ & ಟೂಬ್ರೊ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.
ಟ್ರಂಪ್ ಹೆಚ್ಚುವರಿ ಸುಂಕ ಎಫೆಕ್ಟ್
ಭಾರತೀಯ ಉತ್ಪನ್ನಗಳ ಮೇಲೆ ಹೆಚ್ಚುವರಿ 25 ಪ್ರತಿಶತ ಸುಂಕವನ್ನು ಜಾರಿಗೆ ತರುವ ಯೋಜನೆಗಳ ಕುರಿತು ಅಮೆರಿಕ ಕರಡು ಸೂಚನೆ ನೀಡಿದ ನಂತರ ಭಾರತೀಯ ಷೇರುಮಾರುಕಟ್ಟೆ ಕುಸಿತವಾಗಿದೆ.
ಆಗಸ್ಟ್ 27 ರಿಂದ ಜಾರಿಗೆ ಬರಲಿರುವ ಭಾರತೀಯ ಸರಕುಗಳ ಮೇಲೆ ಅಮೆರಿಕದ 25 ಪ್ರತಿಶತ ಹೆಚ್ಚುವರಿ ಸುಂಕದ ಬಗ್ಗೆ ಕಳವಳಗಳು ಆಮದುದಾರರಿಂದ ಬಲವಾದ ಡಾಲರ್ ಬೇಡಿಕೆಗೆ ಕಾರಣವಾಗಿದ್ದರಿಂದ ರೂಪಾಯಿ ಮೌಲ್ಯ ಕುಸಿದಿದೆ ಎಂದು ಫಾರೆಕ್ಸ್ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ರೂಪಾಯಿ ಮೌಲ್ಯ ಇಳಿಕೆ!
ಅತ್ತ ಭಾರತೀಯ ಷೇರುಮಾರುಕಟ್ಟೆ ಕುಸಿತದ ಬೆನ್ನಲ್ಲೇ ಭಾರತದ ರೂಪಾಯಿ ಮೌಲ್ಯದಲ್ಲೂ ಗಣನೀಯ ಕುಸಿತವಾಗಿದೆ. ಮಂಗಳವಾರ ಡಾಲರ್ ಎದುರು ರೂಪಾಯಿ ಮೌಲ್ಯ ಒಂದೇ ದಿನ ಬರೊಬ್ಬರಿ 12 ಪೈಸೆ ಕುಸಿದು 87.68 ರೂಗೆ ತಲುಪಿದೆ.
Advertisement