
ಮುಂಬೈ: ಕೇಂದ್ರ ಬಜೆಟ್ ಉತ್ಸಾಹದಲ್ಲಿದ್ದ ಭಾರತೀಯ ಷೇರುಮಾರುಕಟ್ಟೆ ವಾರದ ಮೊದಲ ದಿನವೇ ನೀರಸ ವಹಿವಾಟು ನಡೆಸಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ಅಂತ್ಯಗೊಂಡಿವೆ.
ಹೌದು.. ಸೋಮವಾರ ಷೇರುಮಾರುಕಟ್ಟೆ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಭಾರತ ಮಾತ್ರವಲ್ಲದೇ ಇತರೆ ಏಷ್ಯನ್ ಮಾರುಕಟ್ಟೆಗಳೂ ಕೂಡ ನೀರಸ ವಹಿವಾಟು ನಡೆಸಿವೆ.
ಸೋಮವಾರ ಭಾರತೀಯ ಷೇರುಮಾರುಕಟ್ಟೆ ಕುಸಿತದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.41ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.52ರಷ್ಟು ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ ಇಂದು 319.22ಅಂಕಗಳ ಇಳಿಕೆಯೊಂದಿಗೆ 77,186.74 ಅಂಕಗಳಿಗೆ ಕುಸಿತವಾಗಿದ್ದರೆ, ನಿಫ್ಟಿ 121.10 ಅಂಕಗಳ ಕುಸಿತದೊಂದಿಗೆ 23,361.05 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಏಷ್ಯನ್ ಮಾರುಕಟ್ಟೆಗಳ ನೀರಸ ವಹಿವಾಟು!
ಭಾರತ ಮಾತ್ರವಲ್ಲದೇ ಸಿಯೋಲ್, ಟೋಕಿಯೊ ಮತ್ತು ಹಾಂಗ್ ಕಾಂಗ್‌ನಲ್ಲಿನ ಏಷ್ಯಾದ ಮಾರುಕಟ್ಟೆಗಳು ಗಮನಾರ್ಹವಾಗಿ ಕುಸಿತದೊಂದಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದವು. ಯುರೋಪಿಯನ್ ಮಾರುಕಟ್ಟೆಗಳು ಗಣನೀಯ ನಷ್ಟವನ್ನು ಅನುಭವಿಸಿದರೆ, ಅಮೆರಿಕ ಮಾರುಕಟ್ಟೆಗಳು ಕೂಡ ಕುಸಿತದೊಂದಿಗೆ ಮುಕ್ತಾಯಗೊಂಡವು.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಬಜಾಜ್ ಫೈನಾನ್ಸ್ ಸುಮಾರು ಶೇಕಡಾ 5 ರಷ್ಟು ಏರಿಕೆ ಸಾಧಿಸಿದ್ದರೆ, ಉಳಿದಂತೆ ಮಹೀಂದ್ರಾ & ಮಹೀಂದ್ರಾ, ಬಜಾಜ್ ಫಿನ್‌ಸರ್ವ್, ಭಾರ್ತಿ ಏರ್‌ಟೆಲ್ ಮತ್ತು ಮಾರುತಿ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಲಾರ್ಸೆನ್ & ಟೂಬ್ರೊ, ಟಾಟಾ ಮೋಟಾರ್ಸ್, ಹಿಂದೂಸ್ತಾನ್ ಯೂನಿಲಿವರ್, ಏಷ್ಯನ್ ಪೇಂಟ್ಸ್, ಐಟಿಸಿ, ಪವರ್ ಗ್ರಿಡ್, ಎನ್‌ಟಿಪಿಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.
Advertisement