
ಬೆಂಗಳೂರು: ಬೆಂಗಳೂರಿನ ವಸತಿ ಮಾರುಕಟ್ಟೆಯು 2024 ರಲ್ಲಿ 55,363 ಮನೆಗಳ ಮಾರಾಟ ಕಂಡಿದೆ, ಕಳೆದ ದಶಕದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಖಲಿಸಿದೆ ಎಂದು ಫ್ರಾಂಕ್ ನೈಟ್ ಇಂಡಿಯಾದ ಇಂಡಿಯಾ ರಿಯಲ್ ಎಸ್ಟೇಟ್ ಇತ್ತೀಚಿನ ವರದಿಯನ್ನು ಬಹಿರಂಗಪಡಿಸಿದೆ.
ಇದರಲ್ಲಿ, 2 ಕೋಟಿಯಿಂದ 5 ಕೋಟಿ ದರದ 9,583 ಮನೆಗಳು ಮಾರಾಟವಾಗುವುದರೊಂದಿಗೆ ಹೆಚ್ಚು ಬೇಡಿಕೆಯಲ್ಲಿವೆ, 2023 ರಲ್ಲಿ ಈ ವಿಭಾಗದಲ್ಲಿನ ಮಾರಾಟವನ್ನು ಶೇ.91 ರಷ್ಟು ಮೀರಿಸಿದೆ ಎಂದು ವರದಿ ತಿಳಿಸಿದೆ.
'ಇಂಡಿಯಾ ರಿಯಲ್ ಎಸ್ಟೇಟ್: ರೆಸಿಡೆನ್ಶಿಯಲ್ ಮತ್ತು ಆಫೀಸ್' (ಜುಲೈ - ಡಿಸೆಂಬರ್ 2024) ಶೀರ್ಷಿಕೆಯ ವರದಿಯನ್ನು ಮಂಗಳವಾರ ಸಾರ್ವಜನಿಕಗೊಳಿಸಲಾಗಿದೆ. 5 ಕೋಟಿ ಮತ್ತು 10 ಕೋಟಿ ವರ್ಗದ ಮನೆಗಳ ಮಾರಾಟದಲ್ಲಿ ಹಿಂದಿನ ವರ್ಷಕ್ಕಿಂತ ಶೇ.58 ರಷ್ಟು ಹೆಚ್ಚಳ ಕಂಡಿದೆ. ರೂ 10 ಕೋಟಿ-ರೂ 20 ಕೋಟಿ ವರ್ಗವು ವರ್ಷದಿಂದ ವರ್ಷಕ್ಕೆ 20% ಹೆಚ್ಚಾಗಿದೆ. "ನಿರ್ದಿಷ್ಟವಾಗಿ ರೂ 1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆ ವಿಭಾಗಗಳು ಒಟ್ಟು ವಸತಿ ಮಾರಾಟದ 54% ರಷ್ಟಿದೆ, ಇದು ನಗರದ ವಸತಿ ಮಾರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯದ ವಹಿವಾಟಿನ ಕಡೆಗೆ ಸ್ಪಷ್ಟ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ" ಎಂದು ವರದಿ ತಿಳಿಸಿದೆ.
ಸರಾಸರಿ ವಸತಿ ಬೆಲೆಗಳಲ್ಲಿ 12% ರಷ್ಟು ಬೆಲೆ ಏರಿಕೆಯಾಗಿದ್ದು 2024 ರಲ್ಲಿ 6,620 ರೂ./ಚದರ ಅಡಿ ತಲುಪಿದೆ. ಸರ್ಜಾಪುರ ರಸ್ತೆ (ಪ್ರತಿ ಚದರ ಅಡಿಗೆ 5,000 ರಿಂದ 11,000) ಮತ್ತು ಕೆ ಆರ್ ಪುರಂ (ಪ್ರತಿ ಚದರ ಅಡಿಗೆ ರೂ 5,200 ರಿಂದ 9,000) ಏರಿಕೆಯಾಗಿದೆ. ವರ್ಷದ ಮೊದಲಾರ್ಧಕ್ಕೆ ಹೋಲಿಸಿದರೆ 2024 ರ ದ್ವಿತೀಯಾರ್ಧದಲ್ಲಿ ಶೇ.10 ರಷ್ಟು ಗರಿಷ್ಠ ಬೆಲೆ ಏರಿಕೆ ದಾಖಲಿಸಿದೆ. ವೈಟ್‌ಫೀಲ್ಡ್ ನಲ್ಲಿ ಪ್ರತಿ ಚದರ ಅಡಿಗೆ 6,000-ರೂಪಾಯಿಯಿಂದ 11,000 ಕ್ಕೆ ಮಾರಾಟವಾಗಿದೆ. ಈ ಮೂಲಕ ಶೇ.7 ರಷ್ಟು ಏರಿಕೆ ಕಂಡಿದೆ.
ದೇಶದ ವಾಣಿಜ್ಯ ಕಚೇರಿ ಮಾರುಕಟ್ಟೆಯಲ್ಲಿ ಬೆಂಗಳೂರಿನ ಪ್ರಾಬಲ್ಯವು ಮುಂದುವರಿದಿದೆ, ಏಕೆಂದರೆ ಇದು 2024 ರಲ್ಲಿ ಅಗ್ರ ನಗರಗಳಾದ್ಯಂತ ಒಟ್ಟಾರೆ ಕಚೇರಿ ವಹಿವಾಟಿನ ಪ್ರಮಾಣದ ನಾಲ್ಕನೇ ಒಂದು ಭಾಗವನ್ನು ದಾಖಲಿಸಿದೆ.
ಬೆಂಗಳೂರು H2 2024 ರಲ್ಲಿ 9.7 ಮಿಲಿಯನ್ ಚದರ ಅಡಿಗಳಷ್ಟು ಐತಿಹಾಸಿಕ ಅರ್ಧ-ವಾರ್ಷಿಕ ಕಚೇರಿ ವಹಿವಾಟುಗಳನ್ನು ದಾಖಲಿಸಿದೆ, H2 2021 ರಲ್ಲಿ ಹಿಂದಿನ ಅತ್ಯುತ್ತಮವಾದ 8.7 ಮಿಲಿಯನ್ ಚದರ ಅಡಿಗಳನ್ನು ಮೀರಿಸಿದೆ ಎಂದು ವರದಿ ಹೇಳಿದೆ.
ಈ ಬೆಳವಣಿಗೆಯಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳು ಮಹತ್ವದ ಪಾತ್ರ ವಹಿಸಿವೆ. "2023 ರಲ್ಲಿ 3.8 ಮಿಲಿಯನ್ ಚದರ ಅಡಿಗಳಿಂದ 2024 ರಲ್ಲಿ 9.3 ಮಿಲಿಯನ್ ಚದರ ಅಡಿಗಳಷ್ಟು ವಹಿವಾಟಿನ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇ.145 ರಷ್ಟು ಹೆಚ್ಚಾಗಿದೆ, ಇದು ನಗರದಲ್ಲಿನ ಒಟ್ಟಾರೆ ಕಚೇರಿ ವಹಿವಾಟಿನ ಪರಿಮಾಣದ ಶೇ.50 ಕ್ಕಿಂತ ಹೆಚ್ಚಿದೆ ಎಂದು ತಿಳಿಸಿದೆ.
Advertisement