
ಮುಂಬೈ: ಸತತ 6ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಭಾರಿ ಏರಿಕೆ ಕಂಡಿದ್ದು, ಸೋಮವಾರ ಷೇರುಮಾರುಕಟ್ಟೆ ಸೂಚ್ಯಂಕಗಳು ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಸೋಮವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.1.40ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.32ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 1,078.88 ಅಂಕಗಳ ಏರಿಕೆಯೊಂದಿಗೆ 77,984.38 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 307.95 ಅಂಕಗಳ ಏರಿಕೆಯೊಂದಿಗೆ 23,658.35 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್ ಮತ್ತು ಎನರ್ಜಿ ವಲಯಗಳ ಷೇರುಗಳು ಉತ್ತಮ ವಹಿವಾಟು ನಡೆಸಿ ಲಾಭಾಂಶ ಗಳಿಸಿವೆ.
ಯಾರಿಗೆ ಲಾಭ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಎನ್ ಟಿಪಿಸಿ, ಕೋಟಕ್ ಬ್ಯಾಂಕ್, ಎಸ್ ಬಿಐ, ಟೆಕ್ ಮಹಿಂದ್ರಾ, ಪವರ್ ಗ್ರಿಡ್, ಬಜಾಜ್ ಫಿನಾನ್ಸ್, ಎಕ್ಸಿಸ್ ಬ್ಯಾಂಕ್, ಹೆಚ್ ಸಿಎಲ್ ಟೆಕ್, ಬಜಾಜ್ ಫಿನ್ ಸರ್ವ್ ಮತ್ತು ರಿಲಯನ್ಸ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ.
5.2 ಲಕ್ಷ ಕೋಟಿ ಲಾಭ, ವರ್ಷದ ನಷ್ಟ ಭರ್ತಿ
ಅಂತೆಯೇ ಇಂದಿನ ವಹಿವಾಟು ಸೇರಿದಂತೆ ಕಳೆದ 6 ದಿನಗಳ ಸತತ ಮಾರುಕಟ್ಟೆ ಏರಿಕೆ ಪರಿಣಾಮ ಹೂಡಿಕೆದಾರರಿಗೆ 5.2 ಲಕ್ಷ ಕೋಟಿ ರೂ ಲಾಭವಾಗಿದ್ದು, ಕಳೆದ 1 ವರ್ಷದ ಹೂಡಿಕೆದಾರರ ನಷ್ಟ ಭರ್ತಿಯಾಗಿದೆ ಎಂದು ಹೇಳಲಾಗಿದೆ. ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವು 5.2 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗಿ 418.49 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ ಎಂದು ವರದಿಯೊಂದು ತಿಳಿಸಿದೆ.
Advertisement