

ಚೆನ್ನೈ: ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಆಶ್ಚರ್ಯಕರವಾದ ಬೆಳವಣಿಗೆ ಸಾಧಿಸಿದ್ದು, ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ GDP ಶೇಕಡಾ 8.2 ರಷ್ಟು ಹೆಚ್ಚಿದೆ ಎಂದು ಶುಕ್ರವಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ. ಇದು ಒಂದು ವರ್ಷದ ಹಿಂದಿನ ಇದೇ ಅವಧಿಯಲ್ಲಿ ಶೇಕಡಾ 5.6 ರಿಂದ ಶೇ. 8.2ಕ್ಕೆ ಪ್ರಬಲ ಜಿಗಿತವಾಗಿದೆ ಮತ್ತು ಅಂದಾಜಿಗಿಂತಲೂ ಹೆಚ್ಚಾಗಿದೆ.
ರಾಷ್ಟ್ರೀಯ ಅಂಕಿಅಂಶ ಕಚೇರಿ(NSO) ಬಿಡುಗಡೆ ಮಾಡಿರುವ ದತ್ತಾಂಶದಲ್ಲಿ ತೋರಿಸಿರುವ ಆರ್ಥಿಕ ಬೆಳವಣಿಗೆಯು ಅರ್ಥಶಾಸ್ತ್ರಜ್ಞರು ಮಾಡಿದ ಅಂದಾಜುಗಳನ್ನು ಮೀರಿಸಿದೆ.
ಮೊದಲ ತ್ರೈಮಾಸಿಕದಲ್ಲಿ(ಏಪ್ರಿಲ್-ಜೂನ್) ನೈಜ GDPಯಲ್ಲಿ ಶೇ. 7.8 ರಷ್ಟು ಹೆಚ್ಚಳವಾಗಿತ್ತು. ಈಗ ಎರಡನೇ ತ್ರೈಮಾಸಿಕದಲ್ಲಿ GDP ಶೇಕಡಾ 8.2 ರಷ್ಟು ಹೆಚ್ಚಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿಯ(NSO) ಇತ್ತೀಚಿನ ದತ್ತಾಂಶ ಬಹಿರಂಗಪಡಿಸಿದೆ.
2024-25ರ ಎರಡನೇ ಕ್ವಾರ್ಟರ್ನಲ್ಲಿ ಭಾರತದ ರಿಯಲ್ ಜಿಡಿಪಿ 44.94 ಲಕ್ಷ ಕೋಟಿ ರೂ ಇತ್ತು. ಈ ವರ್ಷದ ಎರಡನೇ ಕ್ವಾರ್ಟರ್ನಲ್ಲಿ ಇದು 48.63 ಲಕ್ಷ ಕೋಟಿ ರೂಗೆ ಏರಿದೆ. ಹಿಂದಿನ ವರ್ಷದ ಕ್ವಾರ್ಟರ್ಗೆ ಹೋಲಿಸಿದರೆ ಆರ್ಥಿಕತೆ ಶೇ. 8.2ರಷ್ಟು ಬೆಳೆದಂತಾಗಿದೆ.
ಪ್ರಾಥಮಿಕವಾಗಿ ಗ್ರಾಮೀಣ ಬೇಡಿಕೆಯ ವಿಸ್ತರಣೆಯಿಂದ ಈ ಬೆಳವಣಿಗೆ ಸಾಧಿಸಿದೆ. ಹೆಚ್ಚಿನ ಕೃಷಿ ಉತ್ಪಾದನೆ, ಸ್ಥಿರವಾದ ಕೃಷಿ ಆದಾಯ ಮತ್ತು ಗ್ರಾಮೀಣ ಜಿಲ್ಲೆಗಳಲ್ಲಿ ಕಾರ್ಮಿಕ ಮಾರುಕಟ್ಟೆ ಪರಿಸ್ಥಿತಿಗಳ ಸುಧಾರಣೆಯು ಖಾಸಗಿ ಬಳಕೆಯನ್ನು ಬಲಪಡಿಸಿದೆ. ಇದು ಭಾರತದ GDP ಯ ಪ್ರಮುಖ ಆಧಾರಸ್ತಂಭವಾಗಿ ಉಳಿದಿದೆ.
ದತ್ತಾಂಶದ ಪ್ರಕಾರ, ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಶೇ. 9.1ರಷ್ಟು ಬೆಳೆದಿದೆ. ಈ ಉತ್ಪಾದನಾ ವಲಯದ ಬೆಳವಣಿಗೆ ತುಸು ಅನಿರೀಕ್ಷಿತವೆನಿಸಿದೆ. ಭಾರತದ ಈ ಕ್ವಾರ್ಟರ್ನ ಜಿಡಿಪಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಹಣಕಾಸು, ರಿಯಲ್ ಎಸ್ಟೇಟ್, ವೃತ್ತಿಪರ ಸೇವೆಗಳ ಉತ್ಪಾದನೆ ಶೇ. 10.2ರಷ್ಟು ಬೆಳೆದಿದೆ. ಕೃಷಿ ವಲಯ ಶೇ. 3.5ರಷ್ಟು ಸಾಧಾರಣ ಬೆಳವಣಿಗೆ ಕಂಡಿದೆ. ವಿದ್ಯುತ್, ಗ್ಯಾಸ್, ನೀರು ಸರಬರಾಜು ಮೊದಲಾದ ನಾಗರಿಕ ಸೇವೆಗಳ ಸೆಕ್ಟರ್ ಕೂಡ ಶೇ. 4.4ರ ಸಾಧಾರಣ ಬೆಳವಣಿಗೆ ಕಂಡಿದೆ.
ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆರ್ಥಿಕತೆಯು ಶೇ. 7.3 ರಷ್ಟು ಇರಬಹುದೆಂಬ ಅಂದಾಜಿಸಲಾಗಿತ್ತು. ಆದರೆ ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ದೇಶದ ಆರ್ಥಿಕತೆ ಬೆಳವಣಿಗೆ ಕಂಡಿದೆ. ಈ ಗಣನೀಯ ಬೆಳವಣಿಗೆಗೆ ಸೇವಾ ವಲಯ ಮತ್ತು ಕೃಷಿ ವಲಯಗಳಲ್ಲಿ ದಾಖಲಾಗಿರುವ ಬೆಳವಣಿಗೆ ಪ್ರಮುಖ ಕಾರಣಗಳಾಗಿವೆ.
ಇದಕ್ಕೂ ಮೊದಲು 2024ರ ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ. 8.4ರಷ್ಟು ಗರಿಷ್ಠ ಬೆಳವಣಿಗೆ ಕಂಡಿತ್ತು. ಇದೀಗ ಮತ್ತೆ ಶೇ. 7.8ರಷ್ಟು ಬೆಳವಣಿಗೆಯೊಂದಿಗೆ ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎಂಬ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.
Advertisement