
ಮುಂಬೈ: ಅಮೆರಿಕದ ಹೆಚ್ಚುವರಿ ಸುಂಕ ಹೇರಿಕೆ ಬೆನ್ನಲ್ಲೇ ಸತತವಾಗಿ ಕುಸಿದಿದ್ದ ಭಾರತೀಯ ಷೇರುಮಾರುಕಟ್ಟೆ ಕೊನೆಗೂ ಚೇತರಿಕೆ ಕಂಡಿದ್ದು, ವಾರದ ಆರಂಭದ ದಿನ ಸೋಮವಾರ ಮಾರುಕಟ್ಟೆಯ ಉಭಯ ಸೂಚ್ಯಂಕಗಳು ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಸಿವೆ.
ಸೋಮವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.70ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.81ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 554.84ಅಂಕಗಳ ಏರಿಕೆಯೊಂದಿಗೆ 80,364.49 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 198.20 ಅಂಕಗಳ ಏರಿಕೆಯೊಂದಿಗೆ 24,625.05 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಐಟಿ, ಬಂಡವಾಳ ಸರಕುಗಳು ಮತ್ತು ಆಟೋ ವಲಯಗಳ ಷೇರುಗಳು ಉತ್ತಮ ವಹಿವಾಟು ನಡೆಸಿ ಲಾಭಾಂಶ ಗಳಿಸಿವೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಮಹೀಂದ್ರಾ & ಮಹೀಂದ್ರಾ, ಟಾಟಾ ಮೋಟಾರ್ಸ್, ಟ್ರೆಂಟ್, ಎಟರ್ನಲ್, ಏಷ್ಯನ್ ಪೇಂಟ್ಸ್ ಮತ್ತು ಇನ್ಫೋಸಿಸ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಸನ್ ಫಾರ್ಮಾ, ಐಟಿಸಿ, ಹಿಂದೂಸ್ತಾನ್ ಯೂನಿಲಿವರ್ ಮತ್ತು ಟೈಟಾನ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.
5 ಲಕ್ಷ ಕೋಟಿ ರೂ ಲಾಭ
ಇನ್ನು ಇಂದಿನ ಭರ್ಜರಿ ವಹಿವಾಟಿನ ಪರಿಣಾಮ ಹೂಡಿಕೆದಾರರಿಗೆ 5 ಲಕ್ಷ ಕೋಟಿ ರೂ ಲಾಭಾಂಶ ದೊರೆತಿದೆ. ಬಿಎಸ್‌ಇ-ಪಟ್ಟಿಮಾಡಿದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನಲ್ಲಿ 444 ಲಕ್ಷ ಕೋಟಿಗಿಂತ ಕಡಿಮೆಯಿತ್ತು. ಇದೀಗ ಇಂದಿನ ದಿನದ ವಹಿವಾಟು ಅಂತ್ಯದ ವೇಳೆ ಹೂಡಿಕೆದಾರರ ಸಂಪತ್ತು ಒಂದೇ ವಹಿವಾಟಿನಲ್ಲಿ 5 ಲಕ್ಷ ಕೋಟಿಗೂ ಹೆಚ್ಚು ಏರಿಕೆಯಾಗಿದೆ.
ಮಾರುಕಟ್ಟೆಗೆ ಚೇತರಿಕೆ ತಂದ ಜಿಡಿಪಿ ವರದಿ
ಇನ್ನು ಇತ್ತೀಚೆಗೆ ಭಾರತದ ಭವಿಷ್ಯದ ಕುರಿತ ಜಿಡಿಪಿ ವರದಿಗಳು ಬಿಡುಗಡೆಯಾಗಿ ಭಾರತದ ಆಶಾದಾಯಕ ಪ್ರದರ್ಶನ ಕುರಿತು ವರದಿ ಮಾಡಿದ್ದವು. ಭಾರತದ ಮೊದಲ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ಮಾರುಕಟ್ಟೆ ನಿರೀಕ್ಷೆಗಳನ್ನು ಮೀರಿದ ನಂತರ ಮಾರುಕಟ್ಟೆ ಭಾವನೆ ಸುಧಾರಿಸಿದೆ. ಮುಂಬರುವ ಕೌನ್ಸಿಲ್ ಸಭೆಯಲ್ಲಿ ಜಿಎಸ್‌ಟಿ ತರ್ಕಬದ್ಧಗೊಳಿಸುವಿಕೆಯ ನಿರೀಕ್ಷೆಗಳು ಮಾರುಕಟ್ಟೆಗೆ ಪ್ರಮುಖ ಸಕಾರಾತ್ಮಕ ಅಂಶವಾಗಿ ಉಳಿದಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Advertisement