
ಮುಂಬೈ: ಭಾರತೀಯ ಷೇರುಮಾರುಕಟ್ಟೆ ಬುಧವಾರ ಚೇತೋಹಾರಿ ವಹಿವಾಟು ನಡೆಸಿದ್ದು, ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳು ಗ್ರೀನ್ ನಲ್ಲಿ ಅಂತ್ಯವಾಗಿವೆ.
ಬುಧವಾರದ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಅಲ್ಪ ಪ್ರಮಾಣದ ಏರಿಕೆ ಕಂಡಿದ್ದು, ಸೆನ್ಸೆಕ್ಸ್ ಶೇ.0.51ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.55ರಷ್ಟು ಏರಿಕೆ ದಾಖಲಿಸಿದೆ.
ಸೆನ್ಸೆಕ್ಸ್ ಇಂದು 409.83ಅಂಕಗಳ ಏರಿಕೆಯೊಂದಿಗೆ 80,567.71 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 135.45 ಅಂಕಗಳ ಏರಿಕೆಯೊಂದಿಗೆ 24,715.05 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಇಂಧನ ವಲಯದ ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಲೋಹ ಮತ್ತು ಕೈಗಾರಿಕಾ ವಲಯಗಳ ಷೇರುಗಳು ಉತ್ತಮ ವಹಿವಾಟು ನಡೆಸಿ ಲಾಭಾಂಶ ಗಳಿಸಿವೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಟಾಟಾ ಸ್ಟೀಲ್ ಸುಮಾರು ಶೇಕಡಾ 5.90 ರಷ್ಟು ಏರಿಕೆಯೊಂದಿಗೆ ಭಾರಿ ಮುನ್ನಡೆ ಸಾಧಿಸಿದ್ದರೆ, ಉಳಿದಂತೆ ಟೈಟಾನ್, ಮಹೀಂದ್ರಾ & ಮಹೀಂದ್ರಾ, ಐಟಿಸಿ, ಎಟರ್ನಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮತ್ತು ಟ್ರೆಂಟ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ.
ಅಂತೆಯೇ ಇನ್ಫೋಸಿಸ್, ಹೆಚ್ ಡಿಎಫ್ ಸಿ ಲೈಫ್, ಎನ್ ಟಿಪಿಸಿ, ವಿಪ್ರೋ ಮತ್ತು ನೆಸ್ಲೆ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.
ಜಿಎಸ್ ಟಿ ಕೌನ್ಸಿಲ್ ಸಭೆ ಮೇಲೆ ಹೂಡಿಕೆದಾರರ ಕಣ್ಣು
ಇನ್ನು ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಜಿಎಸ್ ಟಿ ಕೌನ್ಸಲ್ ಸಭೆ ನಡೆಯಿತು. ಸಭೆಯಲ್ಲಿ ಉದ್ದಿಮೆದಾರರ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಲಾಗಿತ್ತು.
ಇದು ಹೂಡಿಕೆದಾರರ ಗಮನ ಕೇಂದ್ರೀಕರಿಸಿತ್ತು. ಹೀಗಾಗಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆ ಮೇಲೆ ಹೆಚ್ಚು ಹೂಡಿಕೆ ಮಾಡಿದ ಪರಿಣಾಮ ಮಾರುಕಟ್ಟೆ ಗ್ರೀನ್ ನಲ್ಲಿ ಅಂತ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರೂಪಾಯಿ ಮೌಲ್ಯವೂ ಏರಿಕೆ
ಇದೇ ವೇಳೆ ಡಾಲರ್ ಎದುರು ರೂಪಾಯಿ ಮೌಲ್ಯ ಕೂಡ ಏರಿಕೆಯಾಗಿದ್ದು, ನಿನ್ನೆ ಮಾರುಕಟ್ಟೆ ಅಂತ್ಯದ ವೇಳೆ 88.16 ರೂಗಳಷ್ಟಿದ್ದ ರೂಪಾಯಿ ಮೌಲ್ಯ ಇಂದು 9 ಪೈಸೆಯಷ್ಚು ಮೌಲ್ಯ ಸುಧಾರಿಸಿ 88.07 ರೂಗೆ ಏರಿಕೆಯಾಗಿದೆ.
ಅಂತೆಯೇ ಅನೇಕ ವಿಶ್ಲೇಷಕರು ಕರೆನ್ಸಿ ಪ್ರಸ್ತುತ ಇದೇ ಮಟ್ಟದಲ್ಲಿಯೇ ಇರುತ್ತದೆ ಎಂದು ನಂಬಿದ್ದು, ಸುಂಕ ಸಂಬಂಧಿತ ಅಪಾಯಗಳು ಮತ್ತೆ ತಲೆದೋರಿದರೆ ಅದು 90 ರ ಗಡಿಯತ್ತ ಚಲಿಸುವ ಅಪಾಯವೂ ಇದೆ ಎಂದು ಎಚ್ಚರಿಸಿದ್ದಾರೆ.
Advertisement