

ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಗಡಿಯಾರದ ಮುಳ್ಳಿನಂತೆ ದುಡಿಯುತ್ತಾ, ತಿಂಗಳ ಕೊನೆಯ ಸಂಬಳಕ್ಕಾಗಿ ಕಾಯುವ ದಿನಚರಿಯಿಂದ ಬೇಸರ ಆಗ್ತಾ ಇದ್ದೀಯ? ಸ್ವಂತವಾಗಿ ಏನಾದರೂ ಆರಂಭಿಸಬೇಕೆಂಬ ಆಲೋಚನೆಗಳು ನಿಮಗೆ ಆಗಾಗ ಬರುತ್ತವೆ. ಆದರೆ, ಪ್ರತಿದಿನ 9ರಿಂದ 5ರವರೆಗೆ ಕೆಲಸ ಮಾಡಬೇಕು, ಆ ಗಂಟೆಗಳನ್ನು ಕಡ್ಡಾಯವಾಗಿ ಕಳೆಯಬೇಕು ಎಂದು ಯಾರಾದರೂ ಹೇಳುವುದನ್ನು ನೀವು ಇಷ್ಟಪಡುವುದಿಲ್ಲ. ಯಾಕಂದ್ರೆ, ಆರ್ಥಿಕ ಸ್ವಾತಂತ್ರ್ಯ ಎಂಬುದು ಕೇವಲ ಬ್ಯಾಂಕ್ ಖಾತೆಯಲ್ಲಿರುವ ಹಣವಲ್ಲ; ಅದು ನಿಮ್ಮ ಸಮಯದ ಮೇಲೆ ನೀವು ಸಾಧಿಸುವ ಸಂಪೂರ್ಣ ಹತೋಟಿ. ಅಂದರೆ, ನೀವು ನಿಮ್ಮ ಸಮಯವನ್ನು ನಿಮ್ಮ ಇಚ್ಛೆಯಂತೆ ನಿಯಂತ್ರಿಸುವವರಾಗಬೇಕೆಂದು ಬಯಸುತ್ತೀರಿ. ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸ್ವತಂತ್ರವಾಗಿ ನೋಡಿಕೊಳ್ಳುವ ಕನಸನ್ನು ಸಾಕಾರಗೊಳಿಸುವುದೇ ಇದರ ಮೂಲ ಉದ್ದೇಶ. ಅಪಾರ ಸಂಪತ್ತು ಗಳಿಸಿದ ಅನೇಕ ಸಂಸ್ಥಾಪಕರು ಇದೇ ಕಲ್ಪನೆಯಿಂದ ತಮ್ಮ ಪ್ರಯಾಣವನ್ನು ಆರಂಭಿಸಿದ್ದಾರೆ. ನೀವು ಕನಸು ಕಾಣುತ್ತಿರುವ ಜೀವನವನ್ನು ಸಾಧಿಸಲು, ನಿಮ್ಮ ಬದುಕಿನ ಪ್ರತಿ ದಶಕದಲ್ಲೂ ಹಣಕಾಸಿನ ಯೋಜನೆ ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ವಿವರ ಇಲ್ಲಿದೆ.
20 ರ ಹರೆಯದಲ್ಲಿ ಉಳಿತಾಯದ ಬುನಾದಿ
ನಿಮ್ಮ 20ರ ದಶಕದ ಈ ಹಂತದಲ್ಲಿ ನೀವು ವೃತ್ತಿಜೀವನವನ್ನು ಆರಂಭಿಸಿರುವ ಸಾಧ್ಯತೆ ಹೆಚ್ಚು. ಈ ವೇಳೆ ಸಾಮಾನ್ಯ ಮಟ್ಟದ ಆರಂಭಿಕ ಸಂಬಳವನ್ನು ಪಡೆಯುತ್ತಿರಬಹುದು. ಅದರಲ್ಲೂ, ಕೆಲವೊಮ್ಮೆ ಆದಾಯಕ್ಕಿಂತಲೂ ವೆಚ್ಚಗಳು ವೇಗವಾಗಿ ಏರಿಕೆಯಾಗುತ್ತವೆ ಎಂಬ ಸಂಗತಿಯನ್ನು ಬೇಗನೆ ಗಮನಿಸುತ್ತೀರಿ. ಆದರೆ, ನೀವು ಖರ್ಚು ಎಷ್ಟೇ ಕಡಿಮೆ ಮಾಡಬೇಕು ಅಂದರೂ ಕೂಡ, ವೆಚ್ಚಗಳು ವೇಗವಾಗಿ ಏರುತ್ತಲೇ ಇರುತ್ತದೆ. ಅದರಲ್ಲೂ, ಹಿರಿಯರಿಂದ ಯಾವುದೇ ಆಸ್ತಿ ಸಿಗದ ಸಮಯದಲ್ಲಿ, ನಿಮ್ಮ ಸಂಬಳಕ್ಕೆ ಹೆಚ್ಚಿನ ಮಹತ್ವ ನೀಡುವುದು ಮತ್ತು ಆರ್ಥಿಕ ಸ್ವಾತಂತ್ರ್ಯ ಸಾಧ್ಯವೇ ಎಂಬುದರ ಬಗ್ಗೆ ಗಂಭೀರವಾಗಿ ಚಿಂತಿಸುವುದು ಅನಿವಾರ್ಯವಾಗುತ್ತದೆ. ಹಾಗಾಗಿ, ಸಂಬಳ ಬಂದ ಕೂಡಲೇ ನಿಮ್ಮ ಸಂಬಳದ ಒಂದು ಭಾಗವನ್ನ ಹೂಡಿಕೆಯ ಬಿಲ್‌ನಂತೆ ಪರಿಗಣಿಸಿ ಸೇವ್ ಮಾಡಬೇಕು. ಆರಂಭದಲ್ಲಿ ಇದು ಕಷ್ಟ ಅನ್ನಿಸಬಹುದು. ಆದರೆ, ಇದನ್ನ ಫಾಲೋ ಮಾಡಿಕೊಂಡು ಹೋದಂತೆ ಸಲೀಸು ಎನ್ನಿಸುತ್ತದೆ.
ರಮಿತ್ ಸೇಥಿ ಅವರ 'ಐ ವಿಲ್ ಟೀಚ್ ಯು ಟು ಬಿ ರಿಚ್' ಪುಸ್ತಕದಲ್ಲಿ ತಿಳಿಸಿರುವಂತೆ ಪ್ರಜ್ಞಾಪೂರ್ವಕ ಖರ್ಚು ಯೋಜನೆಯನ್ನು ಪಾಲಿಸಿ. ಅದರಂತೆ, ಮ್ಯೂಚುವಲ್ ಫಂಡ್, ETF ಅಥವಾ ಇಂಡೆಕ್ಸ್ ಫಂಡ್‌ಗಳಲ್ಲಿ ಹೂಡಿಕೆ ಆರಂಭಿಸಿ, ಈ ಮೂಲಕ ನಿಮ್ಮ ಆದಾಯದ ಮಿತಿಯೊಳಗೆ ಬದುಕುವ ಕೌಶಲ್ಯ ನಿಧಾನವಾಗಿ ಬೆಳೆದು ಬರುತ್ತದೆ. ಆದರೆ, ಹಲವರು ಇದನ್ನು ಯಶಸ್ವಿಯಾಗಿ ಅನುಸರಿಸಲು ವಿಫಲರಾಗಬಹುದು; ಕೆಲವೊಮ್ಮೆ ಪೋಷಕರಿಂದ ಆರ್ಥಿಕ ನೆರವು ಪಡೆಯುವ ಪರಿಸ್ಥಿತಿಯೂ ಎದುರಾಗಬಹುದು.
30 ರ ಹರೆಯದಲ್ಲಿ ನಿಯಂತ್ರಣ ಮತ್ತು ರನ್‌ವೇ
ನಿಮ್ಮ 30ರ ದಶಕದಲ್ಲಿ, ನೀವು ಈಗ ವೃತ್ತಿಜೀವನದ ಮಧ್ಯ ಹಂತದಲ್ಲಿ ಸ್ಥಿರತೆಯನ್ನು ಸಾಧಿಸಿರುವ ಸಾಧ್ಯತೆ ಇರುತ್ತದೆ. ಈ ವೇಳೆ ಯಾವುದಾದರೂ ಒಂದು ವಲಯದಲ್ಲಿ ಉತ್ತಮ ಪರಿಣಿತಿಯನ್ನು ಪಡೆದು ಉತ್ತಮ ಆದಾಯವನ್ನು ಕೂಡ ಗಳಿಸುತ್ತಿತೀರಿ. ಆದರೆ 30ರ ವಯಸ್ಸಿನ ಸವಾಲು ಎಂದರೆ ವೆಚ್ಚಗಳು ಹೆಚ್ಚಾಗುತ್ತವೆ. ಸ್ನೇಹಿತರ ವಲಯಕ್ಕೆ ಹೊಂದುವ ಜೀವನಶೈಲಿಯನ್ನು ಉಳಿಸಿಕೊಳ್ಳುವುದು, ಜೊತೆಗೆ ಮನೆ ಸಾಲಗಳು, ಹಿರಿಯರ ಆರೈಕೆ ಜೊತೆಗೆ ಹೂಡಿಕೆ ಮತ್ತು ಇತರ ಅವಲಂಬಿತರ ಜವಾಬ್ದಾರಿಗಳು ನಿಮ್ಮ ಹೆಚ್ಚುವರಿ ಆದಾಯವನ್ನು ಸಂಪೂರ್ಣವಾಗಿ ಹೀರಿಕೊಳ್ಳಬಹುದು. ಮಾರ್ಗನ್ ಹೌಸೆಲ್ ಅವರ 'ದಿ ಸೈಕಾಲಜಿ ಆಫ್ ಮನಿ' ಪುಸ್ತಕದ ಪ್ರಕಾರ, ಹಣಕಾಸಿನ ಯಶಸ್ಸು ಕೇವಲ ಬುದ್ಧಿವಂತಿಕೆಯಲ್ಲ, ಅದು ವ್ಯಕ್ತಿಯ ನಡವಳಿಕೆಗೆ ಸಂಬಂಧಿಸಿದ್ದು. ಬೇರೆಯವರ ಮೆಚ್ಚುಗೆಗಾಗಿ ದುಂದುವೆಚ್ಚ ಮಾಡುವ ಬದಲು, ನಿಯಮಿತ ಉಳಿತಾಯ ಮತ್ತು ತುರ್ತು ಹಣಕಾಸಿನ ರನ್‌ವೇ ರೂಪಿಸಿಕೊಳ್ಳಿ. ಇದು ಉತ್ತಮ ಅವಕಾಶಗಳು ಬಂದಾಗ ಯಾವುದೇ ಆತಂಕವಿಲ್ಲದೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ನೀಡುತ್ತದೆ. ಅಂದರೆ ನಿಮ್ಮ ಸಮಯದ ಮೇಲೆ ನಿಮ್ಮದೇ ನಿಯಂತ್ರಣ. ಈ ಕಾರಣದಿಂದ, ನಿಮ್ಮ ಕನಸಿನ ಅವಕಾಶ ಬಾಗಿಲು ತಟ್ಟಿದಾಗ, ಅದನ್ನು ಸ್ವೀಕರಿಸಲು ಬೇಕಾದಷ್ಟು ಹಣಕಾಸಿನ ಅವಕಾಶ (ರನ್‌ವೇ) ನಿಮ್ಮ ಬಳಿ ಇರುತ್ತದೆ.
40 ರ ದಶಕದ ಸ್ವಾವಲಂಬನೆ ಮತ್ತು ಸ್ವಾತಂತ್ರ್ಯ
ಈ ವೇಳೆಯಲ್ಲಿ ನೀವು ಬಹುಶಃ ನಿಮ್ಮಸಂಪಾದನೆ ಸಾಮರ್ಥ್ಯದ ಉತ್ತುಂಗದಲ್ಲಿದ್ದೀರಿ. ಅದರಂತೆ ಈ ಸಮಯದಲ್ಲಿ ನೀವು ಹೊಂದಿರುವ ಹೆಚ್ಚುವರಿಯು ವೈಯಕ್ತಿಕ ತೃಪ್ತಿಯನ್ನು ಪಡೆಯಲು ನಿಮ್ಮನ್ನು ತಳ್ಳುತ್ತದೆ. ಕಾರ್ಪೊರೇಟ್ ಗೂಡನ್ನು ತೊರೆದು ನಿಮಗೆ ಹೆಚ್ಚು ಮುಖ್ಯವಾದ ವೃತ್ತಿಯನ್ನು ಪ್ರವೇಶಿಸಲು ಇದು ಸಮಯ. ಸ್ವತಂತ್ರ ಕನ್ಸಲ್ಟಿಂಗ್, ಹೊಸ ಸ್ಟಾರ್ಟ್‌ಅಪ್ ಅಥವಾ ಸೃಜನಶೀಲ ಹಾದಿಯನ್ನು ಹಿಡಿಯಲು ಇದು ಸಕಾಲ. ಎರಿಕ್ ಜೋರ್ಗೆನ್ಸನ್ ಅವರ 'ದಿ ಅಲ್ಮನಾಕ್ ಆಫ್ ನೇವಲ್ ರವಿಕಾಂತ್' ಪುಸ್ತಕದಲ್ಲಿ ಹೇಳಿರುವಂತೆ, ಶ್ರೀಮಂತರಾಗಲು ಸಮಯವನ್ನು ಕೇವಲ ಬಾಡಿಗೆಗೆ ನೀಡಬಾರದು. ಹಣವನ್ನು ಸ್ವಾವಲಂಬನೆಯ ಸುರಕ್ಷತಾ ಜಾಲವಾಗಿ ಬಳಸಿಕೊಂಡು ನಿಮ್ಮ ಕನಸಿನ ಜೀವನವನ್ನು ರೂಪಿಸಿಕೊಳ್ಳಿ.
ಹಾಗಾಗಿ, ನೀವು ನಿಮ್ಮ ದಿನಗಳನ್ನು ಹೇಗೆ ಕಳೆಯುತ್ತೀರಿ ಎಂಬುದನ್ನು ಆಯ್ಕೆ ಮಾಡಲು ಹಣವು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತದೆ. ಪ್ರಸ್ತುತ ಮಾಡುತ್ತಿರುವ ಕೆಲಸದ ರಚನೆಯನ್ನು ಗೌರವಿಸುತ್ತಲೇ, ಒಳಗಿಂದೊಳಗೇ ಭವಿಷ್ಯದ ಸ್ವಾತಂತ್ರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಉತ್ತಮ ಅಭ್ಯಾಸಗಳು ಮತ್ತು ಧೈರ್ಯವನ್ನು ಬೆಳೆಸಿಕೊಳ್ಳುವ ಮೂಲಕ ನಿಮ್ಮ ದೂರದ ಬಯಕೆಯನ್ನು ವಾಸ್ತವದ ಅಂತಿಮ ಕನಸನ್ನಾಗಿ ಸುಲಭವಾಗಿ ಪರಿವರ್ತಿಸಬಹುದು.