ರಾಜ್ಯಗಳ ಖಜಾನೆಗೆ ಕೇಂದ್ರದ ಬಲ! ದೀಪಾವಳಿ ಹಬ್ಬಕ್ಕೆ ₹1.09 ಲಕ್ಷ ಕೋಟಿ ತೆರಿಗೆ ಪಾಲು ಬಿಡುಗಡೆ: ಕರ್ನಾಟಕದ ಪಾಲಿಗೆ ದಕ್ಕಿದ್ದೆಷ್ಟು ಕೋಟಿ?

ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ₹4,504 ಕೋಟಿ ತೆರಿಗೆ ಪಾಲಿನ ಹಣವನ್ನು ಬಿಡುಗಡೆ ಮಾಡಿದೆ. ಹಬ್ಬಗಳ ಹಿನ್ನೆಲೆಯಲ್ಲಿ ರಾಜ್ಯಗಳ ಆರ್ಥಿಕತೆಗೆ ಬಲ ತುಂಬಲು ಮತ್ತು ಬಂಡವಾಳ ವೆಚ್ಚವನ್ನು ಉತ್ತೇಜಿಸಲು ಕೇಂದ್ರ ಹಣಕಾಸು ಸಚಿವಾಲಯವು ಈ ಮಹತ್ವದ ಕ್ರಮ ಕೈಗೊಂಡಿದೆ. ಆ ಕುರಿತ ವರದಿ ಇಲ್ಲಿದೆ:
Union Minister for Finance & Corporate Affairs Nirmala Sitharaman
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್Online Desk
Updated on: 

ನವದೆಹಲಿ: ಕೇಂದ್ರ ಸರ್ಕಾರವು ಉತ್ತಮ ತೆರಿಗೆ ಸಂಗ್ರಹದ ಹಿನ್ನೆಲೆಯಲ್ಲಿ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದ ಎಲ್ಲಾ ರಾಜ್ಯಗಳಿಗೆ ಒಟ್ಟು ₹1.09 ಲಕ್ಷ ಕೋಟಿ (₹1,09,019 ಕೋಟಿ) ಹೆಚ್ಚುವರಿ ತೆರಿಗೆ ಪಾಲನ್ನು ಬಿಡುಗಡೆ ಮಾಡಿದೆ. ಈ ಪೈಕಿ ಕರ್ನಾಟಕಕ್ಕೆ ₹4,504 ಕೋಟಿ ಹಣ ಹಂಚಿಕೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿರುವ ಎರಡನೇ ಹೆಚ್ಚುವರಿ ಕಂತು ಇದಾಗಿದೆ. ನಿಯಮಿತವಾಗಿ ಪ್ರತಿ ತಿಂಗಳು ಸಿಗುವ ಜಿಎಸ್‌ಟಿ ಹಾಗೂ ತೆರಿಗೆ ಪಾಲಿನ ಹೊರತಾಗಿ ಈ ವಿಶೇಷ ಮೊತ್ತವನ್ನು ಮುಂಚಿತವಾಗಿ ನೀಡಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಸಾಮಾನ್ಯವಾಗಿ ಕೇಂದ್ರ ಸರ್ಕಾರವು ಪ್ರತಿ ತಿಂಗಳು ರಾಜ್ಯಗಳಿಗೆ ನಿಯಮಿತವಾಗಿ ತೆರಿಗೆ ಪಾಲನ್ನು ನೀಡುತ್ತದೆ. ಆದರೆ, ಹಬ್ಬದ ದಿನಗಳಲ್ಲಿ ರಾಜ್ಯ ಸರ್ಕಾರಗಳ ಕೈಯಲ್ಲಿ ಹೆಚ್ಚಿನ ಹಣದ ಹರಿವು ಇರಲಿ ಮತ್ತು ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳದಿರಲಿ ಎಂಬ ಉದ್ದೇಶದಿಂದ ಒಂದು ಹೆಚ್ಚುವರಿ ಕಂತನ್ನು ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಈ ಹಣ ಎಲ್ಲಿಂದ ಬರುತ್ತದೆ?

ಕೇಂದ್ರ ಸರ್ಕಾರವು ದೇಶಾದ್ಯಂತ ಸಂಗ್ರಹಿಸುವ ಪ್ರಮುಖ ನೇರ ಮತ್ತು ಪರೋಕ್ಷ ತೆರಿಗೆಗಳಾದ ಕಾರ್ಪೊರೇಟ್ ತೆರಿಗೆ, ಆದಾಯ ತೆರಿಗೆ, ಜಿಎಸ್‌ಟಿ ಮತ್ತು ಕಸ್ಟಮ್ಸ್ ಸುಂಕಗಳ ಒಟ್ಟು ಮೊತ್ತದಿಂದ ಈ ಪಾಲನ್ನು ರಾಜ್ಯಗಳಿಗೆ ಹಂಚಲಾಗುತ್ತದೆ. ಅದರಂತೆ, ಪ್ರಸ್ತುತ ಜಾರಿಯಲ್ಲಿರುವ 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಕೇಂದ್ರದ ಒಟ್ಟು ತೆರಿಗೆ ಸಂಗ್ರಹದಲ್ಲಿ ಎಲ್ಲಾ ರಾಜ್ಯಗಳಿಗೆ ಶೇ. 41 ರಷ್ಟು ಹಣವನ್ನು ಹಂಚಬೇಕು. ಈ ಶೇ. 41 ರಷ್ಟು ಮೊತ್ತದಲ್ಲಿ ಕರ್ನಾಟಕದ ಪಾಲು ಶೇ. 3.647 ಆಗಿದೆ. ಈ ಲೆಕ್ಕಾಚಾರದ ಆಧಾರದ ಮೇಲೆಯೇ ಇಂದಿನ ಒಟ್ಟು ₹1.09 ಲಕ್ಷ ಕೋಟಿಯಲ್ಲಿ ಕರ್ನಾಟಕಕ್ಕೆ ₹4,504 ಕೋಟಿ ಸಿಕ್ಕಿದೆ.

ಯಾವ ರಾಜ್ಯಕ್ಕೆ ಎಷ್ಟು?

ದೇಶದ ಒಟ್ಟು 28 ರಾಜ್ಯಗಳಿಗೆ ಒಟ್ಟಾರೆಯಾಗಿ ₹1,09,019 ಕೋಟಿ ಹಂಚಿಕೆ ಮಾಡಲಾಗಿದ್ದು, ಪ್ರಮುಖ ರಾಜ್ಯಗಳಿಗೆ ಸಿಕ್ಕಿರುವ ಪಾಲು ಹೀಗಿದೆ:

  • ಉತ್ತರ ಪ್ರದೇಶ ₹19,208 ಕೋಟಿ

  • ಬಿಹಾರ ₹10,845 ಕೋಟಿ

  • ಮಧ್ಯಪ್ರದೇಶ ₹8,561 ಕೋಟಿ

  • ಪಶ್ಚಿಮ ಬಂಗಾಳ ₹8,198 ಕೋಟಿ

  • ರಾಜಸ್ಥಾನ ₹6,570 ಕೋಟಿ

  • ಕರ್ನಾಟಕ ₹4,504 ಕೋಟಿ

  • ತಮಿಳುನಾಡು: ₹4,447 ಕೋಟಿ

  • ಆಂಧ್ರಪ್ರದೇಶ: ₹4,412 ಕೋಟಿ

  • ತೆಲಂಗಾಣ: ₹2,292 ಕೋಟಿ

  • ಕೇರಳಂ: ₹2,100 ಕೋಟಿ

Union Minister for Finance & Corporate Affairs Nirmala Sitharaman
ಬೆಂಗಳೂರಿಗೂ ವಿಸ್ತರಿಸಿದ ಕೌಟುಂಬಿಕ ಕಲಹ: ಶರ್ಮಿಳಾ ಮಗಳ ಮದುವೆಗೆ 'ಯಲಹಂಕ ಪ್ಯಾಲೇಸ್‌' ನೀಡಲು ಜಗನ್ ನಕಾರ; ಬೇರೆ ಸ್ಥಳದಲ್ಲಿ ಮದುವೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X