ಮನೆಗೆ ಕಳಿಸೋ ಹಣ ನಿಜವಾಗಿಯೂ ಎಲ್ಲಿಗೆ ಹೋಗ್ತಿದೆ? ಹೆತ್ತವರಿಗೆ ಹಣ ಕಳುಹಿಸೋ ಜೊತೆಗೆ ಈ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ!

ಬೆವರು ಸುರಿಸಿ ದುಡಿಯುವ ಲಕ್ಷಾಂತರ ಭಾರತೀಯರು ಪ್ರತಿ ತಿಂಗಳೂ ತಪ್ಪದೇ ಊರಿನಲ್ಲಿರುವ ಹೆತ್ತವರ ಅಕೌಂಟಿಗೆ ಹಣ ವರ್ಗಾಯಿಸುತ್ತಾರೆ. ಆದರೆ, ಆ ಕಷ್ಟದ ಹಣ ನಿಜಕ್ಕೂ ಊಟ, ತಿಂಡಿ ಅಥವಾ ನಿತ್ಯದ ಬದುಕಿಗೆ ಬಳಕೆಯಾಗುತ್ತಿದೆಯಾ? ನೀವು ತಿಳಿಯಲೇಬೇಕಾದ ಕಟು ಸತ್ಯ ಮತ್ತು ಹಣಕಾಸು ಸೂತ್ರಗಳು ಇಲ್ಲಿದೆ ನೋಡಿ:
Sending Money Back Home
ಮನೆಗೆ ಕಳಿಸೋ ಹಣ ನಿಜವಾಗಿಯೂ ಎಲ್ಲಿಗೆ ಹೋಗ್ತಿದೆ?AI Image
Updated on: 

ಊರು ಬಿಟ್ಟು ಪರವೂರಿನಲ್ಲೋ ವಿದೇಶದಲ್ಲೋ ಕಷ್ಟಪಟ್ಟು ದುಡಿಯುವ ಪ್ರತಿಯೊಬ್ಬ ಭಾರತೀಯನ ತಿಂಗಳ ಮೊದಲ ಕರ್ತವ್ಯವೇ ಮನೆಗೆ ಹಣ ಕಳುಹಿಸುವುದು. 1ನೇ ತಾರೀಕು ಬಂತೆಂದರೆ ಖಾತೆಯಿಂದ ಹಣ ವರ್ಗಾವಣೆಯಾಗುತ್ತದೆ, ಪೋಷಕರ ಕೈ ಸೇರುತ್ತದೆ. ಆದರೆ, ನೀವು ಹೊಟ್ಟೆಬಟ್ಟೆ ಕಟ್ಟಿ ಕಳುಹಿಸುವ ಆ ಕಷ್ಟದ ಹಣ ನಿಜವಾಗಿಯೂ ಮನೆಯ ದಿನನಿತ್ಯದ ಅಗತ್ಯಗಳಿಗೆ ಬಳಕೆಯಾಗುತ್ತಿದೆಯೇ ಅಥವಾ ಅನಗತ್ಯವಾಗಿ ಪೋಲಾಗುತ್ತಿದೆಯೇ? ಕೇರಳಂ ಮೈಗ್ರೇಷನ್ ಸರ್ವೆ ಬಿಚ್ಚಿಟ್ಟಿರುವ ಅಂಕಿಅಂಶಗಳು ಹಣ ಕಳುಹಿಸುವ ಪ್ರತಿಯೊಬ್ಬರ ಕಣ್ಣು ತೆರೆಸುವಂತಿವೆ. ನೀವು ಪ್ರೀತಿಯಿಂದ ಮನೆಗೆ ರವಾನಿಸುವ ಹಣ ನಿಮ್ಮ ಕುಟುಂಬದ ಭವಿಷ್ಯಕ್ಕೆ ಕವಚವಾಗುತ್ತಿದೆಯಾ ಅಥವಾ ನಿಧಾನವಾಗಿ ಕರಗಿಹೋಗುತ್ತಿದೆಯಾ ಎನ್ನುವ ಕಟು ಸತ್ಯದ ಸಂಪೂರ್ಣ ವಿವರ ಇಲ್ಲಿದೆ:

ಭಾರತಕ್ಕೆ 2023-24ರಲ್ಲಿ ವಿದೇಶಗಳಿಂದ 118.7 ಬಿಲಿಯನ್ ಡಾಲರ್ ಹಣ ಬಂದಿದ್ದು, ಅದರಲ್ಲಿ ಕೇರಳಂ ಮತ್ತು ತಮಿಳುನಾಡು ಪಾಲು ಸುಮಾರು ಮೂರನೇ ಒಂದು ಭಾಗದಷ್ಟಿದೆ. ಆದರೆ, ಹೀಗೆ ಹಣ ಕಳುಹಿಸುವ ಬಹುತೇಕ ಜನರಿಗೆ ಹಣದ ಬಗ್ಗೆ ನಿಖರ ಯೋಜನೆಯೇ ಇಲ್ಲ!

ಹಾಗಾಗಿ, ಮನೆಗೆ ಹಣ ಕಳುಹಿಸುವ ಈ ಮೂರು ಪ್ರಶ್ನೆಗಳನ್ನು ಕೇಳಿ ನೋಡಿ:

  1. ಹಣದ ಮೊತ್ತವನ್ನು ಹೇಗೆ ನಿರ್ಧರಿಸಲಾಯಿತು?

  2. ಆ ಹಣ ಇನ್ನೊಂದು ತುದಿಯಲ್ಲಿ (ಮನೆಯಲ್ಲಿ) ಏನಾಗುತ್ತಿದೆ?

  3. ಮತ್ತು ಇದು ಯಾವಾಗ ನಿಲ್ಲುತ್ತದೆ?

ಹೆಚ್ಚಿನ ಜನರಿಗೆ ಈ ಮೂರೂ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ. ಆದರೆ, ಹಲವರ ಬಳಿ ಎರಡನೇ ಪ್ರಶ್ನೆಗೆ ಒಂದು ಉತ್ತರವಿದೆ, ಆದರೆ ಅದು ಹಣ ಕಳುಹಿಸುವವರು ನಿರೀಕ್ಷಿಸುವ ಉತ್ತರ ಖಂಡಿತಾ ಅಲ್ಲ.!

ಯಾಕಂದ್ರೆ, 2023ರ ಕೇರಳ ವಲಸೆ ಸಮೀಕ್ಷೆಯು ಹಣ ಪಡೆಯುವ ಕುಟುಂಬಗಳನ್ನು ಆ ಹಣವನ್ನು ಏನು ಮಾಡಿದಿರಿ ಎಂದು ಕೇಳಿತ್ತು. ದಿನಸಿ, ಆಹಾರ ಮತ್ತು ಬಟ್ಟೆಯಂತಹ ದೈನಂದಿನ ವೆಚ್ಚಗಳು ಶೇಕಡಾ 7ಕ್ಕಿಂತ ಕಡಿಮೆ ಇವೆ. ಅತಿ ದೊಡ್ಡ ಏಕೈಕ ಬಳಕೆ ಅಂದರೆ, ಸುಮಾರು ಶೇಕಡಾ 16ರಷ್ಟು ಹಣವನ್ನು ಮನೆ ಅಥವಾ ಅಂಗಡಿಯನ್ನು ನವೀಕರಿಸಲು ಬಳಸಲಾಗಿದೆ. ಎರಡನೇ ಅತಿ ದೊಡ್ಡ ಬಳಕೆ ಶೇಕಡಾ 14ರಷ್ಟು ಬ್ಯಾಂಕ್ ಸಾಲಗಳನ್ನು ಮರುಪಾವತಿಸಲು ಮತ್ತು ಮತ್ತೊಂದು ಶೇಕಡಾ 3ರಷ್ಟು ಅನೌಪಚಾರಿಕ (ಬಡ್ಡಿ ವ್ಯಾಪಾರಿಗಳು) ಸಾಲಗಾರರಿಗೆ ಹೋಗಿದೆ. ಹಾಗಾಗಿ, ಆ ಹಣ ಈಗ ಯಾರಿಗೂ ಅನ್ನ ನೀಡುತ್ತಿಲ್ಲ; ಬದಲಿಗೆ ಮನೆಗಳನ್ನು ಮರುನಿರ್ಮಾಣ ಮಾಡುತ್ತಿದೆ ಮತ್ತು ಸಾಲಗಳನ್ನು ತೀರಿಸುತ್ತಿದೆ ಅಷ್ಟೇ!

ಮುಂದುವರೆದು, ಆ ಸಮೀಕ್ಷೆಯ ಪಟ್ಟಿಯಲ್ಲಿರುವ ಇನ್ನು ಎರಡು ವಿಷಯಗಳು ನಾವು ಗಮನಿಸಬೇಕಾದವುಗಳಾಗಿವೆ:

  • ಕೈಯಲ್ಲಿರುವ ಹಣ: ಕುಟುಂಬಗಳು ಸುಮಾರು ಶೇಕಡಾ 10ರಷ್ಟು ಹಣವನ್ನು ಮನೆಯಲ್ಲೇ ನಗದು ರೂಪದಲ್ಲಿ ಇಟ್ಟುಕೊಂಡಿವೆ ಮತ್ತು ಕೇವಲ ಶೇಕಡಾ 4ರಷ್ಟು ಹಣವನ್ನು ಯಾವುದೇ ರೀತಿಯ ಠೇವಣಿಯಲ್ಲಿ (ಡೆಪಾಸಿಟ್) ಇಟ್ಟಿವೆ. ಅಂದರೆ ಬ್ಯಾಂಕ್‌ಗಿಂತ ಎರಡು ಪಟ್ಟು ಹೆಚ್ಚು ಹಣ ಬಿರುವಿನಲ್ಲೇ ಸುಮ್ಮನೆ ಕುಳಿತಿದೆ.

  • ಆರೋಗ್ಯ ವೆಚ್ಚ ಮತ್ತು ಇನ್ಶೂರೆನ್ಸ್: ಅವರು ಶೇಕಡಾ 7.7ರಷ್ಟು ಹಣವನ್ನು ಆರೋಗ್ಯ ಮತ್ತು ವೈದ್ಯಕೀಯ ಬಿಲ್‌ಗಳಿಗಾಗಿ ಖರ್ಚು ಮಾಡಿದ್ದಾರೆ, ಆದರೆ ಇನ್ಶೂರೆನ್ಸ್‌ಗಾಗಿ ಕೇವಲ ಶೇಕಡಾ 2.1ರಷ್ಟು ಮಾತ್ರ ಹೂಡಿಕೆ ಮಾಡಿದ್ದಾರೆ. ಅಂದರೆ, ಭವಿಷ್ಯದಲ್ಲಿ ನೆರವಾಗಬಹುದಾದ ಇನ್ಶೂರೆನ್ಸ್‌ಗೆ ಇಡುವ ಪ್ರತಿ ಒಂದು ರೂಪಾಯಿಗೆ ಎದುರಾಗಿ, ಪ್ರಸ್ತುತ ಬಿಲ್ ಪಾವತಿಸಲು ನಾಲ್ಕು ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ.

Sending Money Back Home
ಮನೆ ಕೊಳ್ಳುವ ಪ್ಲಾನ್ ಇದೆಯಾ? ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಈ ಸಿಬಿಲ್ ಸ್ಕೋರ್ ಇರಲೇಬೇಕು!

ಹಣ ಕಳುಹಿಸುವವರಿಗೆ ತಮ್ಮ ಜವಾಬ್ದಾರಿ, ಪಡೆಯುವವವರಿಗೆ ಕಾವಲು!

ಇದರ ನಡುವೆ, ಎರಡು ಕಡೆಯವರೂ ಓಪನ್ ಆಗಿ ಮಾತನಾಡಲು ಹಿಂಜರಿಯುವ ಒಂದು ಸಂಭಾಷಣೆಯಿದೆ. ಅದುವೇ, ಹಣ ಕಳುಹಿಸುವವರಿಗೆ ಅದು ತಮ್ಮ ಜವಾಬ್ದಾರಿ ಎನಿಸುತ್ತದೆ, ಆದರೆ ಅದರ ಬಗ್ಗೆ ಮಾತನಾಡಿದರೆ ತಮಗೆ ಬೇಸರವಿದೆ ಎಂದು ಎಲ್ಲಿ ಬಿಂಬಿತವಾಗುತ್ತದೋ ಎಂಬ ಭಯ. ಇತ್ತ ಹಣ ಪಡೆಯುವ ಪೋಷಕರಿಗೆ ತಮಗೇನೋ ಕಾವಲು ಕಾಯಲಾಗುತ್ತಿದೆ ಎನಿಸುತ್ತದೆ ಮತ್ತು ಕೇಳಿದರೆ ತಮಗೆ ದುರಾಸೆ ಎಂದುಕೊಳ್ಳುತ್ತಾರೋ ಎಂಬ ಸಂಕೋಚ. ಹೀಗಾಗಿ ಹಣ ವರ್ಗಾವಣೆಯಾಗುತ್ತಲೇ ಇರುತ್ತದೆ, ಆದರೆ ಯಾರೂ ಇದರ ಬಗ್ಗೆ ಚರ್ಚಿಸುವುದಿಲ್ಲ. ಹಾಗಾಗಿ, ವರ್ಷಕ್ಕೊಮ್ಮೆ ಪೋಷಕರೊಂದಿಗೆ ಕುಳಿತು ಈ ಬಗ್ಗೆ ಒಂದು ಮಾತುಕತೆ ನಡೆಸುವುದು ಅಗತ್ಯ. ಯಾಕೆಂದರೆ ಅದು ಅವರ ಹಣ ಮತ್ತು ಅದರ ಯಾವುದೇ ಭಾಗವನ್ನು ತಿರಸ್ಕರಿಸುವ ಹಕ್ಕು ಅವರಿಗಿದೆ. ಅದರಂತೆ, ಈ ಚರ್ಚೆಯಲ್ಲಿ ಮೂರು ಮುಖ್ಯ ವಿಷಯಗಳಿರಬೇಕು. ಅವು,

  • ಎಲ್ಲಕ್ಕಿಂತ ಮೊದಲು ಸಾಲ ಮುಕ್ತರಾಗಿ: ಪ್ರತಿಯೊಂದು ರೂಪಾಯಿಯಲ್ಲಿ ಹದಿನೇಳು ಪೈಸೆ ಈಗಾಗಲೇ ಸಾಲಗಾರರಿಗೆ ಹೋಗುತ್ತಿದೆ, ಅದರಲ್ಲಿ ಅನೌಪಚಾರಿಕ ಸಾಲಗಳು ಹೆಚ್ಚು ದುಬಾರಿಯಾಗಿರುತ್ತವೆ. ನೀವು ಉಳಿಸುವ ಬಡ್ಡಿಯು ಖಚಿತವಾದ ಲಾಭ, ಆದರೆ ನೀವು ಗಳಿಸಬಹುದಾದ ಆದಾಯವು ಅನಿಶ್ಚಿತ. ಯಾವ ಸಾಲಗಳು ಬಾಕಿ ಇವೆ ಮತ್ತು ಅವುಗಳ ವೆಚ್ಚ ಎಷ್ಟು ಎಂದು ಕೇಳಿ, ಮೊದಲು ಹೆಚ್ಚು ಬಡ್ಡಿ ಇರುವ ಸಾಲವನ್ನು ತೀರಿಸಿ.

  • ಮನೆಯಲ್ಲಿರುವ ನಗದನ್ನು ಹೊರತೆಗೆಯಿರಿ: ಮನೆಯಲ್ಲಿ ನಗದು ರೂಪದಲ್ಲಿ ಇಡುವ ಹಣ ಯಾವುದೇ ಆದಾಯವನ್ನು ತಂದುಕೊಡುವುದಿಲ್ಲ, ಕಳೆದುಹೋದರೆ ಮರಳಿ ಪಡೆಯಲು ಸಾಧ್ಯವಿಲ್ಲ ಮತ್ತು ಹಣದುಬ್ಬರದಿಂದಾಗಿ ಅದರ ಮೌಲ್ಯ ಪ್ರತಿ ವರ್ಷ ಕುಸಿಯುತ್ತದೆ. ಅದು ಕುಟುಂಬದ ತುರ್ತು ನಿಧಿಯಾಗಿದ್ದರೆ, ಅದು ಎಷ್ಟಿರಬೇಕು ಎಂಬುದನ್ನು ಪರಸ್ಪರ ಒಪ್ಪಿಕೊಂಡು, ಒಂದು ದಿನದಲ್ಲಿ ಹಿಂಪಡೆಯಬಹುದಾದ ಮತ್ತು ಜೊತೆಗೆ ಬೆಳೆಯಬಹುದಾದ ಜಾಗಕ್ಕೆ (ಉದಾಹರಣೆಗೆ ಬ್ಯಾಂಕ್ ಖಾತೆ ಅಥವಾ ಲಿಕ್ವಿಡ್ ಫಂಡ್) ವರ್ಗಾಯಿಸಿ.

  • ಬಿಲ್ ಪಾವತಿಸುವ ಬದಲು ಇನ್ಶೂರೆನ್ಸ್ ಮಾಡಿಸಿ: ಸಮೀಕ್ಷೆಯ ಎರಡು ಪ್ರಮುಖ ಅಂಕಿಅಂಶಗಳೆಂದರೆ ವೈದ್ಯಕೀಯ ಬಿಲ್‌ಗಳಿಗೆ ಹೋಗುವ ಶೇಕಡಾ 7.7 ಮತ್ತು ವಿಮೆಗೆ ಹೋಗುವ ಶೇಕಡಾ 2.1. ಒಂದು ಉತ್ತಮ ಆರೋಗ್ಯ ಇನ್ಶೂರೆನ್ಸ್ ಮೊದಲ ವೆಚ್ಚವನ್ನು ಭರಿಸುತ್ತದೆ ಮತ್ತು ಉಳಿದ ಹಣವನ್ನು ಬೇರೆ ಕೆಲಸಗಳಿಗೆ ಉಳಿಸುತ್ತದೆ. ನಿಮ್ಮ ಪೋಷಕರಿಗೆ 60 ವರ್ಷ ದಾಟಿದ್ದು, ಇನ್ನೂ ಇನ್ಶೂರೆನ್ಸ್  ಇಲ್ಲದಿದ್ದರೆ, ಇದು ಅತ್ಯಂತ ತುರ್ತು ಕೆಲಸವಾಗಿದೆ. ಯಾಕೆಂದರೆ ಬಿಕ್ಕಟ್ಟಿನ ಸಮಯದಲ್ಲಿ ಖರೀದಿಸುವ ವಿಮೆಯು ಕಾಯುವ ಅವಧಿಯ ಕಾರಣ ತಕ್ಷಣಕ್ಕೆ ನೆರವಾಗುವುದಿಲ್ಲ.

ನಂತರ ಈ ಇಡೀ ಯೋಜನೆಯನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ ಮತ್ತು ಮುಂದಿನ ವರ್ಷ ಅದನ್ನು ಮತ್ತೊಮ್ಮೆ ಪರಿಶೀಲಿಸಿ. 2017ರಲ್ಲಿ ನಿಗದಿಪಡಿಸಿದ ಮೊತ್ತವು 2026ರ ಅಗತ್ಯಕ್ಕೆ ತಕ್ಕಂತೆ ಬದಲಾಗಬೇಕಾಗಬಹುದು. ಹಾಗಾಗಿ, ಮನೆಗೆ ಹಣ ಕಳುಹಿಸುವುದು ಒಬ್ಬ ವ್ಯಕ್ತಿ ತನ್ನ ಆದಾಯದಿಂದ ಮಾಡಬಹುದಾದ ಅತ್ಯಂತ ಗೌರವಾನ್ವಿತ ಕೆಲಸಗಳಲ್ಲಿ ಒಂದಾಗಿದೆ. ಆದರೆ, ಅದು ಮನೆಯಲ್ಲಿ ಯಾರೂ ಚರ್ಚಿಸದ ಅಥವಾ ಪರಿಶೀಲಿಸದ ಏಕೈಕ ಆರ್ಥಿಕ ನಿರ್ಧಾರವಾಗಬಾರದು.

Sending Money Back Home
ತಿಂಗಳಿಗೆ ₹80,000 ಗಳಿಸಿದ್ರೂ ಶ್ರೀಮಂತರಲ್ಲ! ಅಮೆರಿಕದ ಬಡವರಿಗಿಂತ ಭಾರತದ ಶ್ರೀಮಂತರ ಆದಾಯವೇ ಕಡಿಮೆ ಎಂದ ವಿಶ್ವ ಬ್ಯಾಂಕ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X