ಕೆಲಸದಿಂದ ತೆಗೆದ್ರೂ ಜಾಕ್‌ಪಾಟ್: ಮ್ಯಾಕ್‌ಬುಕ್ ಜೊತೆಗೆ ಬಿಸಿನೆಸ್ ಫಂಡ್; 1271 ನೌಕರರನ್ನ ವಜಾ ಮಾಡಿ ಬಂಪರ್ ಪ್ಯಾಕೇಜ್ ಕೊಟ್ಟ ಕ್ಯಾನ್ವಾ!

ಪ್ರಮುಖ ಗ್ರಾಫಿಕ್ ಡಿಸೈನಿಂಗ್ ಪ್ಲಾಟ್‌ಫಾರ್ಮ್ ಕ್ಯಾನ್ವಾ, 1,271 ನೌಕರರನ್ನು ಕೆಲಸದಿಂದ ವಜಾಗೊಳಿಸಿದೆ. ಆದಾಗ್ಯೂ, ಕೆಲಸ ಕಳೆದುಕೊಂಡ ನೌಕರರಿಗೆ ಕಂಪನಿಯು ಭರ್ಜರಿ ಪರಿಹಾರ ಪ್ಯಾಕೇಜ್ ಪ್ರಕಟಿಸುವ ಮೂಲಕ ಕಾರ್ಪೊರೇಟ್ ಜಗತ್ತಿನ ಗಮನ ಸೆಳೆದಿದೆ. ಆ ಕುರಿತ ವರದಿ ಇಲ್ಲಿದೆ:
Canva CEO Melanie Perkins
ಕ್ಯಾನ್ವಾ ಸಿಇಒ ಮೆಲಾನಿ ಪರ್ಕಿನ್ಸ್Online Desk
Updated on: 

ಸಾಮಾನ್ಯವಾಗಿ ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡಿದರೆ ಕೇವಲ ನೋಟಿಸ್ ಅಥವಾ ಕನಿಷ್ಠ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತವೆ. ಆದರೆ ಜಾಗತಿಕ ಮಟ್ಟದ ಪ್ರಸಿದ್ಧ ಗ್ರಾಫಿಕ್ ಡಿಸೈನ್ ಪ್ಲಾಟ್‌ಫಾರ್ಮ್ ಆದ ಕ್ಯಾನ್ವಾ ಬರೋಬ್ಬರಿ 1,271 ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿದರೂ, ಅವರಿಗೆ ನೀಡಿರುವ ಪರಿಹಾರ ಪ್ಯಾಕೇಜ್ ಮಾತ್ರ ಇಡೀ ಟೆಕ್ ಜಗತ್ತೇ ಹುಬ್ಬೇರಿಸುವಂತೆ ಮಾಡಿದೆ. ಕಂಪನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದ ಉದ್ಯೋಗ ಕಡಿತ ನಡೆದಿದ್ದರೂ, ವಜಾಗೊಂಡ ಸಿಬ್ಬಂದಿಗೆ ಆರು ತಿಂಗಳ ಸಂಬಳ ಮಾತ್ರವಲ್ಲದೆ ಕಂಪನಿಯ ದುಬಾರಿ ಮ್ಯಾಕ್‌ಬುಕ್, ಲಕ್ಷಾಂತರ ರೂಪಾಯಿಗಳ ಬಿಸಿನೆಸ್ ಗ್ರಾಂಟ್ ಸೇರಿದಂತೆ ಇನ್ನಿಲ್ಲದ ಸವಲತ್ತುಗಳನ್ನು ನೀಡಲಾಗಿದೆ. ಹಾಗಾದರೆ ಕ್ಯಾನ್ವಾ ಇಷ್ಟೊಂದು ಸಿಬ್ಬಂದಿಯನ್ನು ಕೈಬಿಡಲು ಅಸಲಿ ಕಾರಣವೇನು? ಕೆಲಸ ಕಳೆದುಕೊಂಡ ನೌಕರರಿಗೆ ಸಿಕ್ಕಿರುವ ಆ ಬಂಪರ್ ಆಫರ್‌ಗಳೇನು? ಇಲ್ಲಿದೆ ಆ ಕುರಿತ ವರದಿ:

ಕ್ಯಾನ್ವಾ ಘೋಷಿಸಿರುವ ಭರ್ಜರಿ ಪರಿಹಾರ ಪ್ಯಾಕೇಜ್‌:

  • 6 ತಿಂಗಳ ಸಂಬಳ: ವಜಾಗೊಂಡಿರುವ ಪ್ರತಿಯೊಬ್ಬ ಉದ್ಯೋಗಿಗೂ ಕನಿಷ್ಠ 6 ತಿಂಗಳ ಪೂರ್ಣ ಸಂಬಳ.

  • ಉಚಿತ ಮ್ಯಾಕ್‌ಬುಕ್: ನೌಕರರು ತಮ್ಮ ಕಚೇರಿ ಕೆಲಸಕ್ಕಾಗಿ ಬಳಸುತ್ತಿದ್ದ ಕಂಪನಿ ನೀಡಿದ ಆಪಲ್ ಮ್ಯಾಕ್‌ಬುಕ್ ಲ್ಯಾಪ್‌ಟಾಪ್‌ಗಳನ್ನು ತಾವೇ ಇಟ್ಟುಕೊಳ್ಳಲು ಅನುಮತಿ ನೀಡಲಾಗಿದೆ. ಸ್ವಂತ ಲ್ಯಾಪ್‌ಟಾಪ್ ಇಲ್ಲದವರಿಗೆ ನೆರವಾಗಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

  • $10,000 ಸ್ಟಾರ್ಟ್ಅಪ್ ಗ್ರಾಂಟ್: ಕೆಲಸ ಕಳೆದುಕೊಂಡ ನೌಕರರು ಸ್ವಂತ ಉದ್ಯಮ ಅಥವಾ ಕಮ್ಯುನಿಟಿ ಪ್ರಾಜೆಕ್ಟ್ ಪ್ರಾರಂಭಿಸಲು ಬಯಸಿದರೆ, ಅವರಿಗೆ ಸುಮಾರು ₹8.4 ಲಕ್ಷ ($10,000 USD) ಆರ್ಥಿಕ ಸಹಾಯಧನವನ್ನು ನೀಡಲಾಗುತ್ತದೆ.

  • 1 ವರ್ಷದ ಉಚಿತ ಆರೋಗ್ಯ ವಿಮೆ: ಅರ್ಹ ದೇಶಗಳಲ್ಲಿನ ನೌಕರರು ಮತ್ತು ಅವರ ಕುಟುಂಬಸ್ಥರಿಗೆ ಮುಂದಿನ 12 ತಿಂಗಳವರೆಗೆ ಉಚಿತ ಆರೋಗ್ಯ ರಕ್ಷಣೆ ಒದಗಿಸಲಾಗುತ್ತದೆ.

  • ಲಿಂಕ್ಡ್‌ಇನ್ ಪ್ರೀಮಿಯಂ ಹಾಗೂ ಕೆರಿಯರ್ ಕೋಚಿಂಗ್: ಮುಂದಿನ ಉದ್ಯೋಗ ಹುಡುಕಾಟಕ್ಕೆ ಅನುಕೂಲವಾಗುವಂತೆ 1 ವರ್ಷದ ಉಚಿತ ಲಿಂಕ್ಡ್‌ಇನ್ ಪ್ರೀಮಿಯಂ ಚಂದಾದಾರಿಕೆ ಹಾಗೂ ರೆಸ್ಯೂಮ್ ಬಿಲ್ಡಿಂಗ್ ಮತ್ತು ಇಂಟರ್ವ್ಯೂ ತಯಾರಿಗಾಗಿ ಒನ್-ಟು-ಒನ್ ತರಬೇತಿ ನೀಡಲಾಗುತ್ತದೆ.

Canva CEO Melanie Perkins
Apple ಕಂಪನಿಗೆ ಬಿತ್ತು ₹47,700 ಕೋಟಿ ದಂಡ! ಹಾಗಾದ್ರೆ, ಟೆಕ್ ದೈತ್ಯ ಮಾಡಿದ ಮೋಸವಾದರೂ ಏನು?

ಹಾಗಾದ್ರೆ, ಈ ಭಾರಿ ವಜಾ ಪ್ರಕ್ರಿಯೆಗೆ ಕಾರಣಗಳೇನು?

  • ಮಂದಗತಿಯ ಬೆಳವಣಿಗೆ: ದಶಕದಲ್ಲೇ ಮೊದಲ ಬಾರಿಗೆ ಕ್ಯಾನ್ವಾದ ಆದಾಯ ಹಾಗೂ ಬೆಳವಣಿಗೆಯ ವೇಗ ತಗ್ಗಿದೆ.

  • AI ತಂತ್ರಜ್ಞಾನದ ಪ್ರಭಾವ: ಮಾರುಕಟ್ಟೆಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಹೊಸ ಆ್ಯಪ್‌ಗಳು ಕ್ರಾಂತಿ ಸೃಷ್ಟಿಸುತ್ತಿದ್ದು, ಚಿತ್ರಗಳು ಮತ್ತು ಪ್ರೆಸೆಂಟೇಷನ್‌ಗಳನ್ನು ಕ್ಷಣಮಾತ್ರದಲ್ಲಿ ಸಿದ್ಧಪಡಿಸುತ್ತಿವೆ. ಈ ತೀವ್ರ ಪೈಪೋಟಿಗೆ ತಕ್ಕಂತೆ ಕಂಪನಿಯನ್ನು ಮರುಸಂಘಟಿಸಲು ಕ್ಯಾನ್ವಾ ಮುಂದಾಗಿದೆ.

  • ಸಂಸ್ಥೆಯ ಮರುಸಂಘಟನೆ: ಕಂಪನಿಯು ತನ್ನ ಪ್ರಾಡಕ್ಟ್, ಗ್ರೋತ್ ಮತ್ತು ಪ್ಲಾಟ್‌ಫಾರ್ಮ್ ತಂಡಗಳನ್ನು ಒಗ್ಗೂಡಿಸಿ ಒಂದೇ ಸೂರಿನಡಿ ತರಲು ನಿರ್ಧರಿಸಿದೆ. ಆಡಳಿತದ ಹಂತಗಳನ್ನು ಸರಳಗೊಳಿಸಿ ಸಣ್ಣ ಮತ್ತು ಸ್ವತಂತ್ರ ತಂಡಗಳನ್ನು ರಚಿಸುವುದು ಇದರ ಉದ್ದೇಶವಾಗಿದೆ.

ಏತನ್ಮಧ್ಯೆ, ಕ್ಯಾನ್ವಾ ಸಿಇಒ ಮೆಲಾನಿ ಪರ್ಕಿನ್ಸ್ ಅವರು ಉದ್ಯೋಗಿಗಳಿಗೆ ಕಳುಹಿಸಿದ ಆಂತರಿಕ ಇಮೇಲ್‌ನಲ್ಲಿ, "ಇದು ನಮ್ಮ ಇತಿಹಾಸದಲ್ಲೇ ಅತ್ಯಂತ ಕಠಿಣ ಕ್ಷಣವಾಗಿದ್ದು, ಇದರಿಂದ ಉಂಟಾಗುವ ನೋವು ಮತ್ತು ಅಡಚಣೆಗೆ ನಾನು ಕ್ಷಮೆಯಾಚಿಸುತ್ತೇನೆ" ಎಂದು ಅತ್ಯಂತ ಬೇಸರ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X