

ಮುಂಬೈ (ಮಹಾರಾಷ್ಟ್ರ): ದೇಶದ ದಿಗ್ಗಜ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದ ವಿಡಿಯೋಕಾನ್ ಗ್ರೂಪ್‌ನ ಮಾಜಿ ಪ್ರವರ್ತಕ ವೇಣುಗೋಪಾಲ್ ಧೂತ್ ಇದೀಗ ಕಾನೂನು ಹಾಗೂ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿ ಅಧಿಕೃತವಾಗಿ ದಿವಾಳಿಯಾಗಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹಾಗೂ ಸಹಯೋಗಿ ಬ್ಯಾಂಕ್‌ಗಳಿಗೆ ಸೇರಬೇಕಿದ್ದ ಬರೋಬ್ಬರಿ 12,668 ಕೋಟಿಗೂ ಅಧಿಕ ಸಾಲದ ಮೊತ್ತವನ್ನು ಮರುಪಾವತಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು (NCLT) ಈ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಸಾಲ ಮರುಪಾವತಿಗಾಗಿ ಅವರು ಮುಂದಿಟ್ಟಿದ್ದ ಕೇವಲ 600 ಕೋಟಿ ರೂಪಾಯಿಗಳ ಒಪ್ಪಂದದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಆ ಕುರಿತ ವರದಿ ಇಲ್ಲಿದೆ:
₹12,668 ಕೋಟಿ ಬಾಕಿ
ವೀಡಿಯೊಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ವೀಡಿಯೊಕಾನ್ ಟೆಲಿಕಮ್ಯುನಿಕೇಷನ್ಸ್ ಲಿಮಿಟೆಡ್ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ಜೂನ್ 2018ರಲ್ಲಿ ವಿಡಿಯೋಕಾನ್ ಇಂಡಸ್ಟ್ರೀಸ್ ವಿರುದ್ಧ ಸಾಂಸ್ಥಿಕ ದಿವಾಳಿತನ ಪರಿಹಾರ ಪ್ರಕ್ರಿಯೆ ಪ್ರಾರಂಭವಾಗಿತ್ತು. ಆದರೆ, ಎಸ್‌ಬಿಐ ಮತ್ತು ಅದರ ಹಿಂದಿನ ಸಹವರ್ತಿ ಬ್ಯಾಂಕ್‌ಗಳು 2010 ಮತ್ತು 2012ರ ಅವಧಿಯಲ್ಲಿ ನೀಡಿದ್ದ ಬೃಹತ್ ಸಾಲ ಸೌಲಭ್ಯಗಳಿಗೆ ವೇಣುಗೋಪಾಲ್ ಧೂತ್ ವೈಯಕ್ತಿಕ ಗ್ಯಾರಂಟಿಯನ್ನು ಬಳಸಿ ಹಣ ಮರುಪಾವತಿಗೆ NCLT ಮೊರೆ ಹೋಗಿತ್ತು. ಸೆಪ್ಟೆಂಬರ್ 30, 2026ರಂತೆ ಒಟ್ಟು ಬಾಕಿ ಮೊತ್ತ 12,668.06 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ರೂಪಾಯಿ ಅವಧಿ ಸಾಲದಡಿ 9,322.10 ಕೋಟಿ ರೂ., ವಿಟಿಎಲ್ ಸೌಲಭ್ಯದಡಿ 1,437.76 ಕೋಟಿ ರೂ. ಮತ್ತು ಕಾರ್ಯವಾಹಕ ಬಂಡವಾಳ ಸೌಲಭ್ಯದಡಿ 1,908.19 ಕೋಟಿ ರೂ. ಸೇರಿವೆ.
₹600 ಕೋಟಿಯ ಆಫರ್ ತಿರಸ್ಕಾರ
ವೈಯಕ್ತಿಕ ದಿವಾಳಿತನ ಪ್ರಕ್ರಿಯೆಯಿಂದ ಪಾರಾಗಲು ಧೂತ್ ಅವರು ಸಿಲಿಗುರಿಯಲ್ಲಿನ ರಿಯಲ್ ಎಸ್ಟೇಟ್ ಯೋಜನೆಯನ್ನು ಆಧರಿಸಿ 36 ತಿಂಗಳುಗಳಲ್ಲಿ ₹600 ಕೋಟಿ ಮರುಪಾವತಿ ಮಾಡುವ ಯೋಜನೆ ಪ್ರಸ್ತಾಪಿಸಿದ್ದರು. ಆದರೆ ಈ ಪ್ರಸ್ತಾಪವು ಒಟ್ಟು ಬಾಕಿ ಮೊತ್ತದ ಶೇ. 0.42 ರಷ್ಟು ಮಾತ್ರವಾಗಿದ್ದು, ಭವಿಷ್ಯದ ಯೋಜನೆ ಮತ್ತು ಅನುಮೋದನೆಗಳ ಮೇಲೆ ಆಧಾರಿತವಾಗಿತ್ತು ಹಾಗೂ ಮುಂಗಡ ಪಾವತಿ ಯಾವುದೂ ಇರಲಿಲ್ಲ. ಬ್ಯಾಂಕ್‌ಗಳು ಮತ್ತು ಪರಿಹಾರ ವೃತ್ತಿಪರರು ಇದನ್ನು ಕಾರ್ಯಸಾಧ್ಯವಲ್ಲವೆಂದು ತಿರಸ್ಕರಿಸಿದರು.
ಆಸ್ತಿ ಮುಟ್ಟುಗೋಲಿಗೆ ಆದೇಶ
ಇನ್ವಾಲ್ವೆನ್ಸಿ ಮತ್ತು ಬ್ಯಾಂಕ್‌ರಪ್ಸಿ ಕೋಡ್ (IBC) ಸೆಕ್ಷನ್ 121ರ ಅಡಿಯಲ್ಲಿ ಎಸ್‌ಬಿಐ ಸಲ್ಲಿಸಿದ್ದ ಅರ್ಜಿಯನ್ನು ಎನ್‌ಸಿಎಲ್‌ಟಿ ಮಾನ್ಯ ಮಾಡಿದ್ದು, ಎನ್‌ಸಿಎಲ್‌ಟಿ ಆದೇಶದ ಪ್ರಕಾರ, ವೇಣುಗೋಪಾಲ್ ಧೂತ್ ಅವರ ಸಂಪೂರ್ಣ ಆಸ್ತಿಯ ನಿಯಂತ್ರಣವನ್ನು ಬ್ಯಾಂಕ್ರಪ್ಟ್ಸಿ ಟ್ರಸ್ಟಿ ಆಶಿಶ್ ನಾರಾಯಣ್ ಅವರಿಗೆ ಹಸ್ತಾಂತರಿಸಲಾಗಿದೆ. ಇನ್ನು ಮುಂದೆ ಧೂತ್ ತಮ್ಮ ಯಾವುದೇ ಆಸ್ತಿಯ ಮೇಲೆ ಹಕ್ಕು ಹೊಂದುವುದಿಲ್ಲ. ಟ್ರಸ್ಟಿಯು ಈ ಆಸ್ತಿಗಳನ್ನು ನಿರ್ವಹಿಸಿ, ಹರಾಜು ಅಥವಾ ಮಾರಾಟದ ಮೂಲಕ ಬ್ಯಾಂಕ್‌ಗಳ ಸಾಲ ತೀರಿಸಲು ಬಳಸಲಿದ್ದಾರೆ. ಹಾಗಾಗಿ, ಧೂತ್ ಅವರು ತಮ್ಮ ಸಂಪೂರ್ಣ ಹಣಕಾಸು ಸ್ಥಿತಿ ಮತ್ತು ಆಸ್ತಿ ವಿವರಗಳ ಹೇಳಿಕೆಯನ್ನು 7 ದಿನಗಳ ಒಳಗಾಗಿ ಟ್ರಸ್ಟಿಗೆ ಸಲ್ಲಿಕೆ ಮಾಡಬೇಕೆಂದು ನ್ಯಾಯಮಂಡಳಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಅದರಂತೆ, ಟ್ರಸ್ಟಿಯು ಸಾರ್ವಜನಿಕ ಅಧಿಸೂಚನೆಯನ್ನು ಹೊರಡಿಸಿ ಸಾಲಗಾರರಿಂದ ಹಕ್ಕುಗಳನ್ನು ಆಹ್ವಾನಿಸಬೇಕು ಮತ್ತು 90 ದಿನಗಳೊಳಗೆ ನ್ಯಾಯಮಂಡಳಿಗೆ ಪ್ರಾಥಮಿಕ ವರದಿ ಸಲ್ಲಿಸಬೇಕು.
ಏತನ್ಮಧ್ಯೆ, ಗ್ರಾಹಕ ಎಲೆಕ್ಟ್ರಾನಿಕ್ಸ್‌ನಲ್ಲಿ ದೇಶದ ಪ್ರಮುಖ ಬ್ರ್ಯಾಂಡ್ ಆಗಿದ್ದ ವೀಡಿಯೊಕಾನ್, ನಂತರ ಕೈಹಾಕಿದ ಟೆಲಿಕಾಂ, ತೈಲ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿನ ಭಾರಿ ನಷ್ಟದಿಂದಾಗಿ ಮುಳುಗಿತು. ಜೊತೆಗೆ, ವೀಡಿಯೊಕಾನ್ ಗ್ರೂಪ್ ಕಂಪನಿಗಳ ಮೇಲೆ ಬ್ಯಾಂಕ್‌ಗಳು ಹಾಗೂ ಪೂರೈಕೆದಾರರಿಗೆ ಸೇರಿ ಒಟ್ಟಾರೆಯಾಗಿ 80,000 ಕೋಟಿ ರೂ.ಗಳಿಗೂ ಅಧಿಕ ಸಾಲದ ಹೊರೆ ಇತ್ತು. 2021ರಲ್ಲಿ ವೇದಾಂತ ಸಮೂಹದ 'ಟ್ವಿನ್ ಸ್ಟಾರ್ ಟೆಕ್ನಾಲಜೀಸ್' ಕಂಪನಿಯನ್ನು ಖರೀದಿಸಲು ಮುಂದಾಗಿತ್ತಾದರೂ, ಆ ಪ್ರಕ್ರಿಯೆ ಕಾನೂನು ಹೋರಾಟಗಳಲ್ಲಿ ಸಿಲುಕಿಕೊಂಡಿತ್ತು.
ಒಟ್ಟಾರೆಯಾಗಿ, ಈ ಪ್ರಕ್ರಿಯೆಯು ಭಾರತೀಯ ದಿವಾಳಿತನ ನಿಯಮಾವಳಿ (IBC) ಅಡಿಯಲ್ಲಿ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ವೈಯಕ್ತಿಕ ಗ್ಯಾರಂಟಿದಾರರ ವಿರುದ್ಧ ಕೈಗೊಳ್ಳಲಾದ ಅತಿ ದೊಡ್ಡ ಕಾನೂನು ಕ್ರಮಗಳಲ್ಲಿ ಒಂದಾಗಿದೆ.