ವಿದೇಶಿ ಬಂಡವಾಳ ಒಳಹರಿವು, ಕಚ್ಚಾ ತೈಲ ಬೆಲೆ ಇಳಿಕೆ: ಡಾಲರ್ ಎದುರು ರೂಪಾಯಿ ಮೌಲ್ಯ ಇಂದು ಇಷ್ಟಿದೆ...

2027ರ ಹಣಕಾಸು ವರ್ಷದಲ್ಲಿ ಏಷ್ಯಾದ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕರೆನ್ಸಿಗಳಲ್ಲಿ ರೂಪಾಯಿ ಕೂಡ ಒಂದಾಗಿದೆ. ವಿದೇಶಿ ಹೂಡಿಕೆ ನಿಧಿಗಳ ಒಳಹರಿವು ಇದೇ ರೀತಿ ಮುಂದುವರಿದರೆ, ಬಾಹ್ಯ ಆರ್ಥಿಕ ಅನಿಶ್ಚಿತತೆಗಳ ವಿರುದ್ಧ ರೂಪಾಯಿಗೆ ಮಹತ್ವದ ರಕ್ಷಣೆ ಒದಗಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
Indian Rupees
ಭಾರತೀಯ ಕರೆನ್ಸಿ
Updated on: 

ವಿದೇಶಿ ಬಂಡವಾಳದ ನಿರಂತರ ಒಳಹರಿವು, ಕಚ್ಚಾ ತೈಲ ಬೆಲೆಗಳಲ್ಲಿನ ಇಳಿಕೆ ಮತ್ತು ಸುಧಾರಿಸುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಬೆಂಬಲದಿಂದ ದೀಪಾವಳಿ ಹಬ್ಬ ಕಳೆದು ಇಂದು ಬುಧವಾರ ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 7 ಪೈಸೆ ಏರಿಕೆಯಾಗಿ 93.70ಕ್ಕೆ ತಲುಪಿದೆ.

ತಿಂಗಳುಗಳ ಕಾಲ ಎಚ್ಚರಿಕೆಯ ಹೂಡಿಕೆ ಧೋರಣೆ ಅನುಸರಿಸಿ, ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹಿಂಪಡೆದಿದ್ದ ವಿದೇಶಿ ಹೂಡಿಕೆದಾರರು ಇದೀಗ ಕ್ರಮೇಣ ದೇಶೀಯ ಮಾರುಕಟ್ಟೆಯತ್ತ ಮರಳುತ್ತಿದ್ದಾರೆ ಎಂದು ವಿದೇಶಿ ವಿನಿಮಯ ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

2027ರ ಹಣಕಾಸು ವರ್ಷದಲ್ಲಿ ಏಷ್ಯಾದ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕರೆನ್ಸಿಗಳಲ್ಲಿ ರೂಪಾಯಿ ಕೂಡ ಒಂದಾಗಿದೆ. ವಿದೇಶಿ ಹೂಡಿಕೆ ನಿಧಿಗಳ ಒಳಹರಿವು ಇದೇ ರೀತಿ ಮುಂದುವರಿದರೆ, ಬಾಹ್ಯ ಆರ್ಥಿಕ ಅನಿಶ್ಚಿತತೆಗಳ ವಿರುದ್ಧ ರೂಪಾಯಿಗೆ ಮಹತ್ವದ ರಕ್ಷಣೆ ಒದಗಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

Indian Rupees
ಕೈ ಕೊಟ್ಟ ಮುಹೂರ್ತ: 8 ವರ್ಷಗಳ ಷೇರುಮಾರುಕಟ್ಟೆ ನಾಗಾಲೋಟಕ್ಕೆ ಕೊನೆಗೂ ಬಿತ್ತು ಬ್ರೇಕ್!

ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಸುಮಾರು 93.71ರಲ್ಲಿ ವಹಿವಾಟು ಆರಂಭಿಸಿತು. ಬಳಿಕ 93.70ಕ್ಕೆ ತಲುಪಿದ್ದು, ಸೋಮವಾರದ ವಹಿವಾಟಿನ ಅಂತ್ಯಕ್ಕೆ ಇದ್ದ ಮೌಲ್ಯಕ್ಕಿಂತ 7 ಪೈಸೆ ಏರಿಕೆಯಾಗಿದೆ.

ದೀಪಾವಳಿ ಬಲಿಪಾಡ್ಯಮಿ ಹಿನ್ನೆಲೆಯಲ್ಲಿ ನಿನ್ನೆ ಮಂಗಳವಾರ ದೇಶೀಯ ಷೇರು, ಕರೆನ್ಸಿ ಮತ್ತು ಸಾಲ ಮಾರುಕಟ್ಟೆಗಳಿಗೆ ರಜೆ ಇತ್ತು. ಸೋಮವಾರ ಡಾಲರ್ ಎದುರು ರೂಪಾಯಿ ಮೌಲ್ಯ 21 ಪೈಸೆ ಏರಿಕೆಯಾಗಿ 93.77ಕ್ಕೆ ತಲುಪಿತ್ತು.

ವಿದೇಶಿ ಬಂಡವಾಳದ ನಿರಂತರ ಒಳಹರಿವು, ಕಚ್ಚಾ ತೈಲ ಬೆಲೆಗಳ ಇಳಿಕೆ ಮತ್ತು ಸುಧಾರಿಸುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಬೆಂಬಲದಿಂದ ರೂಪಾಯಿಯ ಆಂತರಿಕ ಚಲನೆ ಸಕಾರಾತ್ಮಕವಾಗಿದೆ. ಈ ಪೂರಕ ಅಂಶಗಳು ಮುಂದುವರಿದರೆ, ಡಾಲರ್ ಎದುರು ರೂಪಾಯಿ ವಿನಿಮಯ ದರ 93.50ರತ್ತ ಮತ್ತಷ್ಟು ಇಳಿಯಬಹುದು. 93.00 ಮುಂದಿನ ಪ್ರಮುಖ ಮಟ್ಟವಾಗಿರಲಿದೆ ಎಂದು ಸಿಆರ್ ಫಾರೆಕ್ಸ್ ಅಡ್ವೈಸರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಪಬಾರಿ ಹೇಳಿದ್ದಾರೆ.

ಇದೇ ವೇಳೆ, ಆರು ಪ್ರಮುಖ ಕರೆನ್ಸಿಗಳ ಎದುರು ಅಮೆರಿಕನ್ ಡಾಲರ್‌ನ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇ. 0.03ರಷ್ಟು ಏರಿಕೆಯಾಗಿ 102.26ರಲ್ಲಿ ವಹಿವಾಟು ನಡೆಸುತ್ತಿತ್ತು.

ಜಾಗತಿಕ ತೈಲ ಮಾನದಂಡವಾಗಿರುವ ಬ್ರೆಂಟ್ ಕಚ್ಚಾ ತೈಲದ ಭವಿಷ್ಯದ ವಹಿವಾಟಿನ ಬೆಲೆ ಶೇ. 1.01ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 92.41 ಅಮೆರಿಕನ್ ಡಾಲರ್‌ಗೆ ತಲುಪಿತ್ತು.

ಕಚ್ಚಾ ತೈಲದ ಬೆಲೆ ಕಡಿಮೆಯಾದರೆ ಆಮದು ವೆಚ್ಚ ತಗ್ಗುವ ಮೂಲಕ ರೂಪಾಯಿಗೆ ಬೆಂಬಲ ಸಿಗುತ್ತದೆ. ಆದರೆ, ಅಮೆರಿಕದಲ್ಲಿ ಹೆಚ್ಚುತ್ತಿರುವ ಬಾಂಡ್ ಇಳುವರಿ ಮತ್ತು ಬಲಗೊಳ್ಳುತ್ತಿರುವ ಡಾಲರ್ ರೂಪಾಯಿಯ ಮೇಲೆ ವ್ಯತಿರಿಕ್ತ ಒತ್ತಡ ಸೃಷ್ಟಿಸುತ್ತವೆ ಎಂದು ಕೋಟಕ್ ನಿಯೋ ಸಂಸ್ಥೆಯ ಸರಕು ಮತ್ತು ಕರೆನ್ಸಿ ಸಂಶೋಧನಾ ವಿಭಾಗದ ಮುಖ್ಯಸ್ಥ ಅನಿಂದ್ಯ ಬ್ಯಾನರ್ಜಿ ಹೇಳಿದ್ದಾರೆ.

ನಾಳೆ ಬಿಡುಗಡೆಯಾಗಲಿರುವ ಭಾರತದ ಹಣದುಬ್ಬರ ದತ್ತಾಂಶವು ದೇಶೀಯ ಆರ್ಥಿಕ ನೀತಿಯ ಮುಂದಿನ ಪ್ರಮುಖ ಸೂಚನೆಯಾಗಲಿದೆ ಎಂದು ಅನಿಂದ್ಯ ಬ್ಯಾನರ್ಜಿ ತಿಳಿಸಿದ್ದಾರೆ.

Indian Rupees
ಹೊಸ ವರ್ಷದಿಂದ ಹೊಸ ಚೆಕ್ ಬುಕ್ ಕಡ್ಡಾಯವೇ? ಆರ್‌ಬಿಐ ಸ್ಪಷ್ಟನೆ ಏನು? Cheque Book ನಿಯಮಗಳ ಬದಲಾವಣೆ ಕುರಿತ ವದಂತಿಗೆ RBI ಹೇಳಿದ್ದೇನು?

ಷೇರು ವಿನಿಮಯ ಕೇಂದ್ರದ ದತ್ತಾಂಶಗಳ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ 7,212.22 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಷೇರುಗಳ ಮಾರಾಟದ ಒತ್ತಡ, ದೇಶೀಯ ಕಂಪನಿಗಳ ಉತ್ತಮ ಗಳಿಕೆ ಮತ್ತು ದೊಡ್ಡ ಕಂಪನಿಗಳ ಷೇರುಗಳ ಆಕರ್ಷಕ ಮೌಲ್ಯಮಾಪನದ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆದಾರರು ನವೆಂಬರ್‌ನಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ನಿವ್ವಳ ಖರೀದಿದಾರರಾಗಿ ಹೊರಹೊಮ್ಮಿದ್ದಾರೆ. ಸತತ ಎರಡು ತಿಂಗಳ ಬಂಡವಾಳ ಹೊರಹರಿವಿನ ಬಳಿಕ ನವೆಂಬರ್‌ನ ಮೊದಲ ಒಂಬತ್ತು ದಿನಗಳಲ್ಲಿ 53,739 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.

ಠೇವಣಿದಾರರ ಸಂಸ್ಥೆಗಳಲ್ಲಿರುವ ದತ್ತಾಂಶಗಳ ಪ್ರಕಾರ, ಇದಕ್ಕೂ ಮೊದಲು ಅಕ್ಟೋಬರ್‌ನಲ್ಲಿ 34,843 ಕೋಟಿ ರೂಪಾಯಿ ಮತ್ತು ಸೆಪ್ಟೆಂಬರ್‌ನಲ್ಲಿ 35,861 ಕೋಟಿ ರೂಪಾಯಿ ನಿವ್ವಳ ಬಂಡವಾಳವನ್ನು ವಿದೇಶಿ ಹೂಡಿಕೆದಾರರು ಹಿಂಪಡೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X