TVS ಕುಟುಂಬದಲ್ಲಿ ಆಸ್ತಿ ವಿವಾದ ಸ್ಫೋಟ: ತಂದೆ ವೇಣು ಶ್ರೀನಿವಾಸ್​ಗೆ ಆಸ್ತಿಯಲ್ಲಿ ಸಮಾನ ಪಾಲು ಕೋರಿ ಪುತ್ರಿ ಲಕ್ಷ್ಮಿ ವೇಣು ನೋಟಿಸ್

ಟಿವಿಎಸ್ ಕುಟುಂಬದ ಆಸ್ತಿ ಹಂಚಿಕೆ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಟಿವಿಎಸ್ ಹೋಲ್ಡಿಂಗ್ಸ್ ಅಧ್ಯಕ್ಷ ವೇಣು ಶ್ರೀನಿವಾಸನ್ ಅವರ ಪುತ್ರಿ ಲಕ್ಷ್ಮಿ ವೇಣು ತಂದೆಯ ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಸಮಾನ ಪಾಲು ಕೋರಿ ಕಾನೂನುಬದ್ಧ ವಿಭಜನ ನೋಟಿಸ್ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
tvs property dispute: venu srinivasan daughter lakshmi srinivasan demands equal share in joint family assets
ತಂದೆ ವೇಣು ಶ್ರೀನಿವಾಸ್​ಗೆ ಆಸ್ತಿಯಲ್ಲಿ ಸಮಾನ ಪಾಲು ಕೋರಿ ಪುತ್ರಿ ಲಕ್ಷ್ಮಿ ವೇಣು ನೋಟಿಸ್Online Desk
Updated on: 

ಚೆನ್ನೈ (ತಮಿಳುನಾಡು): ಭಾರತದ ಪ್ರತಿಷ್ಠಿತ ವಾಹನ ತಯಾರಿಕಾ ಸಮೂಹವಾದ ಟಿವಿಎಸ್ (TVS) ಕುಟುಂಬದಲ್ಲಿ ಆಸ್ತಿ ಹಂಚಿಕೆ ವಿಚಾರವಾಗಿ ಕಾನೂನು ಸಮರ ಆರಂಭವಾಗಿದೆ. ಟಿವಿಎಸ್ ಸಮೂಹದ ಹಿರಿಯ ಉದ್ಯಮಿ ವೇಣು ಶ್ರೀನಿವಾಸನ್ ಅವರ ಪುತ್ರಿ ಲಕ್ಷ್ಮಿ ವೇಣು, ತಮ್ಮ ತಂದೆಯ ಶಾಖೆಯ ಜಂಟಿ ಕುಟುಂಬ ಆಸ್ತಿಯಲ್ಲಿ ಸಮಾನ ಪಾಲು ಕೋರಿ ಅಧಿಕೃತವಾಗಿ ವಿಭಜನಾ ನೋಟಿಸ್ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಸಹೋದರನಿಗೆ ಹೆಚ್ಚಿನ ಪಾಲು?

ಕಳೆದ ಏಪ್ರಿಲ್‌ನಲ್ಲಿ ಟಿವಿಎಸ್ ಹೋಲ್ಡಿಂಗ್ಸ್‌ನ ಪ್ರಮುಖ ಫಲಾನುಭವಿ ಮಾಲೀಕರಾಗಿ ತಮ್ಮ ಕಿರಿಯ ಸಹೋದರ ಸುದರ್ಶನ್ ವೇಣು ಅವರನ್ನು ಹೆಸರಿಸಲಾಗಿತ್ತು. ಆಸ್ತಿ ಮತ್ತು ವ್ಯವಹಾರಗಳ ಹೆಚ್ಚಿನ ಲಾಭವನ್ನು ಸಹೋದರನ ಪರವಾಗಿ ಕೇಂದ್ರೀಕರಿಸಿ, ತನ್ನ ಕಾನೂನುಬದ್ಧ ಹಕ್ಕುಗಳನ್ನು ಕಡೆಗಣಿಸಲಾಗಿದೆ ಎಂದು ಲಕ್ಷ್ಮಿ ವೇಣು ಆರೋಪಿಸಿದ್ದಾರೆ. ಹಾಗಾಗಿ, 2005ರಲ್ಲಿ ತಿದ್ದುಪಡಿಯಾದ 1956ರ ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ, ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರರಿಗೆ ಇರುವಷ್ಟೇ ಸಮಾನ ಹಕ್ಕು ಪುತ್ರಿಯರಿಗೂ ಇದೆ ಎಂದು ವಿವರಿಸಿರುವ ಲಕ್ಷ್ಮಿ ವೇಣು, ಆಡಳಿತ ನಿರ್ವಹಣೆಯು ಏಕಸ್ವಾಮ್ಯದ ಮಾಲೀಕತ್ವವನ್ನು ನೀಡುವುದಿಲ್ಲ ಎಂದಿದ್ದಾರೆ.

ತಾಯಿಯ ಬೆಂಬಲ:

ಲಕ್ಷ್ಮಿ ವೇಣು ಅವರ ತಾಯಿ ಹಾಗೂ ಟ್ರ್ಯಾಕ್ಟರ್ ತಯಾರಿಕಾ ಸಂಸ್ಥೆ ಟಾಫೆ (TAFE) ಮುಖ್ಯಸ್ಥೆ ಮಲ್ಲಿಕಾ ಶ್ರೀನಿವಾಸನ್ ಅವರು ಮಗಳ ಬೇಡಿಕೆಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಹಕ್ಕಿರಬೇಕು ಎಂದಿರುವ ಅವರು, ಸೌಹಾರ್ದಯುತ ಮಾತುಕತೆಯ ಮೂಲಕ ಈ ವಿವಾದ ಬಗೆಹರಿಸಲು ಮಾಡಿದ ಪ್ರಯತ್ನಗಳು ಫಲ ನೀಡದ ಕಾರಣ ಈ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದ್ದಾರೆ.

tvs property dispute: venu srinivasan daughter lakshmi srinivasan demands equal share in joint family assets
SBI ಬ್ಯಾಂಕ್‌ಗೆ ₹12,668 ಕೋಟಿ ಸಾಲ ಬಾಕಿ: ಮಾಜಿ ವೀಡಿಯೊಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ದಿವಾಳಿ ಎಂದ NCLT

ವಿವಾದಕ್ಕೊಳಗಾದ ಪ್ರಮುಖ ಸಂಸ್ಥೆಗಳು:

2020ರ ಟಿವಿಎಸ್ ಕುಟುಂಬ ಒಪ್ಪಂದದಡಿ ವೇಣು ಶ್ರೀನಿವಾಸನ್ ಶಾಖೆಗೆ ಹಂಚಿಕೆಯಾದ ವಿಎಸ್ ಟ್ರಸ್ಟ್ (VS Trust), ಟಿವಿಎಸ್ ಹೋಲ್ಡಿಂಗ್ಸ್, ಟಿವಿಎಸ್ ಮೋಟಾರ್ ಕಂಪನಿ, ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಮತ್ತು ಸುಂದರಂ-ಕ್ಲೇಟನ್ ಕಂಪನಿಗಳ ಪಾಲನ್ನು ಸಮಾನವಾಗಿ ವಿಭಜಿಸಬೇಕು ಎಂದು ಲಕ್ಷ್ಮಿ ಕೋರಿದ್ದಾರೆ.

ಹಾಗಾದ್ರೆ, ಎರಡು ಬಣಗಳ ನಿಲುವೇನು?

2020ರ ಟಿವಿಎಸ್ ಕುಟುಂಬದ ಒಪ್ಪಂದ ಮತ್ತು 2024ರ ತಿಳುವಳಿಕೆ ಪತ್ರದ ಅಡಿಯಲ್ಲಿ ಈಗಾಗಲೇ ವ್ಯಾಪಾರಗಳ ಜವಾಬ್ದಾರಿಯನ್ನು (ಸುದರ್ಶನ್‌ಗೆ ಟಿವಿಎಸ್ ಮೋಟಾರ್ ಮತ್ತು ಲಕ್ಷ್ಮಿ ಅವರಿಗೆ ಸುಂದರಂ-ಕ್ಲೇಟನ್) ನ್ಯಾಯಯುತವಾಗಿ ಹಂಚಲಾಗಿದೆ ಎಂಬುದು ವೇಣು ಶ್ರೀನಿವಾಸನ್ ಬಣದ ವಾದವಾಗಿದೆ. ಆದರೆ, 2024ರ ಒಪ್ಪಂದವು ಕೇವಲ ಬ್ರ್ಯಾಂಡ್ ಬಳಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದ್ದೇ ಹೊರತು, ಆಸ್ತಿಯ ಮೌಲ್ಯಮಾಪನ ಮತ್ತು ಆರ್ಥಿಕ ವಿಭಜನೆಯಲ್ಲ ಎಂದು ಲಕ್ಷ್ಮಿ ಮತ್ತು ಮಲ್ಲಿಕಾ ವಾದಿಸಿದ್ದಾರೆ. ಸದ್ಯ ಈ ಪ್ರಕರಣ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದು, ಕುಟುಂಬ ಸದಸ್ಯರು ಕೇವಿಯಟ್ ಅರ್ಜಿಗಳನ್ನು ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X