

Gold Storage Limit At Home: ಭಾರತೀಯ ಕುಟುಂಬಗಳಲ್ಲಿ ಬಂಗಾರ ಕೇವಲ ಆಭರಣವಲ್ಲ, ಬದಲಿಗೆ ಅದೊಂದು ಸುರಕ್ಷಿತ ಉಳಿತಾಯ ಮತ್ತು ಭವಿಷ್ಯದ ಆಸ್ತಿ.! ಅದರಲ್ಲೂ, ಹಬ್ಬ ಹರಿದಿನಗಳು, ಮದುವೆ ಸಮಾರಂಭಗಳಲ್ಲಿ ಚಿನ್ನ ಕೊಳ್ಳುವುದು ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ. ಆದರೆ, ಮನೆಯಲ್ಲಿ ಎಷ್ಟು ಬೇಕಾದರೂ ಚಿನ್ನವನ್ನು ಇಟ್ಟುಕೊಳ್ಳಬಹುದೇ ಅಥವಾ ಅದಕ್ಕೇನಾದರೂ ಕಾನೂನು ಮಿತಿ ಇದೆಯೇ ಎಂಬುದು ಹಲವರಲ್ಲಿರುವ ಸಾಮಾನ್ಯ ಗೊಂದಲ. ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ ಮನೆಯಲ್ಲಿ ರಶೀದಿ ಅಥವಾ ಯಾವುದೇ ದಾಖಲೆಗಳಿಲ್ಲದೆ ಎಷ್ಟು ಬಂಗಾರ ಇಡಲು ಅವಕಾಶವಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಮನೆಯಲ್ಲಿ ಎಷ್ಟು ಗೋಲ್ಡ್ ಇಡಬಹುದು?
ಭಾರತದಲ್ಲಿ ನೀವು ಕಾನೂನುಬದ್ಧವಾಗಿ ಸಂಪಾದಿಸಿದ ಆದಾಯದಿಂದ ಎಷ್ಟು ಬೇಕಾದರೂ ಬಂಗಾರವನ್ನು ಖರೀದಿಸಿ ಮನೆಯಲ್ಲಿ ಇಟ್ಟುಕೊಳ್ಳಬಹುದು. ಅದಕ್ಕೆ ಯಾವುದೇ ಗರಿಷ್ಠ ಮಿತಿ ಇಲ್ಲ. ಆದರೆ, ನಿಮ್ಮ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ, ನೀವು ಇಟ್ಟಿರುವ ಬಂಗಾರಕ್ಕೆ ಸೂಕ್ತ ಆದಾಯದ ಮೂಲ ಅಥವಾ ಬಿಲ್ ಇಲ್ಲದಿದ್ದರೆ, ಮುಟ್ಟುಗೋಲು ಹಾಕಿಕೊಳ್ಳದಂತೆ ತಡೆಯಲು ಸರ್ಕಾರ ಒಂದು ನಿರ್ದಿಷ್ಟ ಮಿತಿಯನ್ನು ನಿಗದಿಪಡಿಸಿದೆ. ಅದುವೇ,
ವಿವಾಹಿತ ಮಹಿಳೆಯರು: ಯಾವುದೇ ದಾಖಲೆ ಇಲ್ಲದಿದ್ದರೂ ಗರಿಷ್ಠ 500 ಗ್ರಾಂವರೆಗೆ ಚಿನ್ನದ ಆಭರಣಗಳನ್ನು ಇಟ್ಟುಕೊಳ್ಳಲು ಕಾನೂನಿನಲ್ಲಿ ರಕ್ಷಣೆ ಇದೆ.
ಅವಿವಾಹಿತ ಮಹಿಳೆಯರು: ಅವಿವಾಹಿತ ಯುವತಿಯರು ಅಥವಾ ಮಹಿಳೆಯರು ತಮ್ಮ ಬಳಿ 250 ಗ್ರಾಂವರೆಗೆ ಚಿನ್ನವನ್ನು ಪುರಾವೆ ಇಲ್ಲದೆ ಹೊಂದಿರಬಹುದು.
ಪುರುಷರು: ಪುರುಷರಿಗೆ ವಿವಾಹಿತರಾಗಿರಲಿ ಅಥವಾ ಅವಿವಾಹಿತರಾಗಿರಲಿ, ಇಬ್ಬರಿಗೂ ಗರಿಷ್ಠ ಮಿತಿ ಕೇವಲ 100 ಗ್ರಾಂ ಮಾತ್ರ.
ಈ ಮಿತಿಯು ಕೇವಲ ಬಂಗಾರದ ಆಭರಣಗಳಿಗೆ ಮಾತ್ರ ಅನ್ವಯಿಸುತ್ತದೆ. ಬಂಗಾರದ ಬಿಸ್ಕೆಟ್ ಅಥವಾ ಕಾಯಿನ್‌ಗಳಿಗೆ ಇದು ಅನ್ವಯಿಸುವುದಿಲ್ಲ.
ಮುಂದುವರೆದು, ನಿಮ್ಮ ಬಳಿ ಈ ಮೇಲಿನ ಮಿತಿಗಿಂತ ಹೆಚ್ಚಿನ ಚಿನ್ನವಿದ್ದರೆ, ಅದಕ್ಕೆ ತಕ್ಕ ಚಿನ್ನ ಖರೀದಿಸಿದ ಬಿಲ್, ಉಡುಗೊರೆಯಾಗಿ ಬಂದಿದ್ದರೆ ಅದರ ದಾಖಲೆ ಅಥವಾ ವಂಶಪಾರಂಪರ್ಯವಾಗಿ ಬಂದಿದ್ದರೆ ಅದಕ್ಕೆ ಸಂಬಂಧಿಸಿದ ವಿಲ್ ಮುಂತಾದ ಪುರಾವೆಗಳನ್ನು ಹೊಂದಿರಬೇಕು. ಒಂದು ವೇಳೆ ಐಟಿ ದಾಳಿಯಾದಾಗ ನಿಮ್ಮ ಬಳಿ ನಿಗದಿತ ಮಿತಿಗಿಂತ ಹೆಚ್ಚಿನ ಚಿನ್ನವಿದ್ದು, ಅದಕ್ಕೆ ಸೂಕ್ತ ದಾಖಲೆ ಇಲ್ಲದಿದ್ದರೆ ಆ ಹೆಚ್ಚುವರಿ ಚಿನ್ನವನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳಬಹುದು. ಅಲ್ಲದೆ, ಅದರ ಮೌಲ್ಯದ ಮೇಲೆ ಶೇ. 60 ರಷ್ಟು ತೆರಿಗೆ ಮತ್ತು ಅದಕ್ಕೆ ತಕ್ಕಂತೆ ದಂಡ ಹಾಗೂ ಶೇ. 25 ರಷ್ಟು ಹೆಚ್ಚುವರಿ ಶುಲ್ಕ ಸಹ ವಿಧಿಸಲಾಗುತ್ತದೆ.
ಹಾಗಾದ್ರೆ, ತೆರಿಗೆ ನಿಯಮಗಳೇನು?
ಮನೆಯಲ್ಲಿ ಚಿನ್ನ ಇಡುವುದಕ್ಕೆ ತೆರಿಗೆ ಇಲ್ಲ. ಆದರೆ ಅದನ್ನು ಮಾರಾಟ ಮಾಡುವಾಗ ಲಾಭದ ಆಧಾರದ ಮೇಲೆ ತೆರಿಗೆ ಅನ್ವಯಿಸುತ್ತದೆ:
Short-Term Capital Gains (STCG): ಚಿನ್ನ ಖರೀದಿಸಿದ 2 ವರ್ಷಗಳ (24 ತಿಂಗಳು) ಒಳಗಾಗಿ ಮಾರಾಟ ಮಾಡಿದರೆ, ಆ ಲಾಭವನ್ನು ನಿಮ್ಮ ಒಟ್ಟು ಆದಾಯಕ್ಕೆ ಸೇರಿಸಿ, ನಿಮ್ಮ ಐಟಿ ಸ್ಲ್ಯಾಬ್ ದರಕ್ಕೆ ತಕ್ಕಂತೆ ತೆರಿಗೆ ವಿಧಿಸಲಾಗುತ್ತದೆ.
Long-Term Capital Gains (LTCG): 2 ವರ್ಷಗಳ ನಂತರ ಚಿನ್ನವನ್ನು ಮಾರಾಟ ಮಾಡಿದರೆ, ಅದಕ್ಕೆ 20% ತೆರಿಗೆ (ಇಂಡೆಕ್ಸೇಶನ್ ಸೌಲಭ್ಯದೊಂದಿಗೆ) ಮತ್ತು ಶಿಕ್ಷಣ ಸೆಸ್ ವಿಧಿಸಲಾಗುತ್ತದೆ.