

ನವದೆಹಲಿ: ಹಬ್ಬ ಬಂತೂ ಅಂದರೆ ಸಾಕು ಇ-ಕಾಮರ್ಸ್ ಆ್ಯಪ್‌ಗಳಲ್ಲಿ ಡಿಸ್ಕೌಂಟ್‌ಗಳ ಅಬ್ಬರ! ದಸರಾ - ದೀಪಾವಳಿ ಸೇಲ್, ವರ್ಷಾಂತ್ಯದ ಸೇಲ್, ಬಚತ್ ಧಮಾಕಾ ಸೇಲ್, ಪ್ರೈಮ್ ಸೇಲ್, ಮೆಂಬರ್ಶಿಪ್ ಸೇಲ್ ಹೀಗೆ ವರ್ಷವಿಡೀ ಒಂದಲ್ಲಾ ಒಂದು ಸೇಲ್ ಹೆಸರಿನಲ್ಲಿ ವಸ್ತುಗಳ ಬೆಲೆ ಹೆಚ್ಚಳ ಮಾಡಿ, ಸೇಲ್ ಸಂದರ್ಭ ಡಿಸ್ಕೌಂಟ್ ಎಂದು ದರ ಕಡಿಮೆ ಮಾಡುವ ಕ್ವಿಕ್-ಕಾಮರ್ಸ್ ಮತ್ತು ಇ-ಕಾಮರ್ಸ್ ಕಂಪನಿಗಳಿಗೆ ಲಗಾಮು ಹಾಕಲು, ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಆನ್‌ಲೈನ್ ಶಾಪಿಂಗ್ ಮಾಡುವ ಗ್ರಾಹಕರ ಹಿತರಕ್ಷಣೆಗಾಗಿ 'ಗ್ರಾಹಕ ರಕ್ಷಣೆ (ಇ-ಕಾಮರ್ಸ್) (ತಿದ್ದುಪಡಿ) ನಿಯಮಗಳು, 2026' ಅನ್ನು ಬಿಡುಗಡೆ ಮಾಡಿದೆ. ಈ ಹೊಸ ನಿಯಮಗಳು ಜನವರಿ 1, 2027ರಿಂದ ದೇಶಾದ್ಯಂತ ಅಧಿಕೃತವಾಗಿ ಜಾರಿಗೆ ಬರಲಿವೆ. ಡಿಜಿಟಲ್ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮೋಸವಾಗುವುದನ್ನು ತಡೆಯಲು ತರಲಾಗಿರುವ ಪ್ರಮುಖ 7 ಬದಲಾವಣೆಗಳು ಇಲ್ಲಿವೆ..
ನಕಲಿ ರಿಯಾಯಿತಿಗಳಿಗೆ ಬ್ರೇಕ್:
ಇನ್ಮುಂದೆ ಯಾವುದೇ ಉತ್ಪನ್ನಕ್ಕೆ ಡಿಸ್ಕೌಂಟ್ (ರಿಯಾಯಿತಿ) ಪ್ರಕಟಿಸುವಾಗ ಇ-ಕಾಮರ್ಸ್ ಕಂಪನಿಗಳು ಕೇವಲ ಆಫರ್ ಬೆಲೆಯನ್ನು ಮಾತ್ರ ತೋರಿಸುವಂತಿಲ್ಲ. ಅದರ ಜೊತೆಗೆ ಹಿಂದಿನ ಬೆಲೆಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. 'ಹಿಂದಿನ ಬೆಲೆ' ಎಂದರೆ ರಿಯಾಯಿತಿ ಘೋಷಿಸುವ ಮುನ್ನಾ 30 ದಿನಗಳಲ್ಲಿ ಆ ಉತ್ಪನ್ನಕ್ಕಿದ್ದ ಅತ್ಯಂತ ಕನಿಷ್ಠ ಬೆಲೆಯಾಗಿದೆ. ಇದರಿಂದ ಹಬ್ಬಗಳ ಹೆಸರಿನಲ್ಲಿ ಬೆಲೆ ಹೆಚ್ಚಿಸಿ ನಂತರ ಸುಳ್ಳು ಡಿಸ್ಕೌಂಟ್ ನೀಡುವುದನ್ನು ತಡೆಯಬಹುದು.
ಸರ್ಚ್ ರಿಸಲ್ಟ್ ತಿರುಚುವಿಕೆಗೆ ನಿಷೇಧ:
ಗ್ರಾಹಕರು ಇ-ಕಾಮರ್ಸ್ ಆ್ಯಪ್‌ಗಳಲ್ಲಿ ಉತ್ಪನ್ನಗಳನ್ನು ಹುಡುಕಿದಾಗ (ಸರ್ಚ್ ಮಾಡಿದಾಗ), ಕಂಪನಿಗಳು ತಮ್ಮ ಸ್ವಂತ ಬ್ರ್ಯಾಂಡ್‌ಗಳನ್ನು ಅಥವಾ ತಮಗೆ ಹೆಚ್ಚು ಕಮಿಷನ್ ಕೊಡುವ ಮಾರಾಟಗಾರರ ಉತ್ಪನ್ನಗಳನ್ನು ಮೊದಲ ಸಾಲಿನಲ್ಲಿ ಬರುವಂತೆ ಸರ್ಚ್ ರಿಸಲ್ಟ್ ತಿರುಚುವಂತಿಲ್ಲ.
ಪ್ರಾಯೋಜಿತ ಉತ್ಪನ್ನಗಳ ಸ್ಪಷ್ಟ ಪ್ರದರ್ಶನ:
ಆನ್‌ಲೈನ್‌ನಲ್ಲಿ ಜಾಹೀರಾತು ಹಣ ಪಡೆದು ಪ್ರದರ್ಶಿಸುವ ಉತ್ಪನ್ನಗಳ ಮೇಲೆ 'Sponsored' ಅಥವಾ 'Ad' ಎಂದು ಗ್ರಾಹಕರಿಗೆ ಸ್ಪಷ್ಟವಾಗಿ ಕಾಣಿಸುವಂತೆ ನಮೂದಿಸಬೇಕು.
ಡಾರ್ಕ್ ಪ್ಯಾಟರ್ನ್ ತಡೆಗೆ ಆಡಿಟ್:
ಗ್ರಾಹಕರಿಗೆ ಗೊತ್ತಿಲ್ಲದಂತೆ ಬಿಲ್‌ನಲ್ಲಿ ಹೆಚ್ಚುವರಿ ಶುಲ್ಕ ಸೇರಿಸುವುದು, ಒಪ್ಪಿಗೆಯಿಲ್ಲದೆ ಸಬ್‌ಸ್ಕ್ರಿಪ್ಷನ್ ಬಲೆಗೆ ಬೀಳಿಸುವುದು ಮುಂತಾದ ಮೋಸದ ತಂತ್ರಗಳನ್ನು ಬಳಸುವಂತಿಲ್ಲ. ಇದಕ್ಕಾಗಿ ಕಂಪನಿಗಳು ವರ್ಷಕ್ಕೊಮ್ಮೆ ಸ್ವಯಂ-ಲೆಕ್ಕಪರಿಶೋಧನೆ ನಡೆಸಿ, ತಾವು ನಿಯಮ ಪಾಲಿಸುತ್ತಿರುವ ಪ್ರಮಾಣಪತ್ರವನ್ನು ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಬೇಕು.
ಬಂಡಲ್ಡ್ ಶುಲ್ಕಗಳ ವಸೂಲಾತಿಗೆ ಇಲ್ಲ ಅವಕಾಶ:
ಇ-ಕಾಮರ್ಸ್ ವಹಿವಾಟಿಗೆ ನೇರವಾಗಿ ಸಂಬಂಧಪಡದ ಯಾವುದೇ ಅನಗತ್ಯ ಸೇವೆಗಳಿಗೆ (ಉದಾಹರಣೆಗೆ ಗ್ರಾಹಕರ ಒಪ್ಪಿಗೆಯಿಲ್ಲದೆ ಇನ್ಶೂರೆನ್ಸ್ ಅಥವಾ ಡೊನೇಶನ್ ಶುಲ್ಕವನ್ನು ಆಟೋ-ಆಡ್ ಮಾಡುವುದು) ಹೆಚ್ಚುವರಿ ಹಣ ವಸೂಲಿ ಮಾಡುವಂತಿಲ್ಲ.
ಆಮದು ಉತ್ಪನ್ನಗಳ ಕಡ್ಡಾಯ ವಿವರ:
ವಿದೇಶಗಳಿಂದ ಆಮದು ಮಾಡಿಕೊಂಡ ಸರಕುಗಳಿದ್ದಲ್ಲಿ, ಆಮದುದಾರರ ಸಂಪೂರ್ಣ ವಿವರ ಹಾಗೂ ಆ ಉತ್ಪನ್ನದ ಮೂಲ ದೇಶದ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು. ಇದರೊಂದಿಗೆ ಪದಾರ್ಥಗಳ ಎಕ್ಸ್‌ಪೈರಿ ದಿನಾಂಕ ಮತ್ತು ವಾರಂಟಿ ವಿವರಗಳನ್ನು ಸುಲಭವಾಗಿ ಕಾಣುವಂತೆ ನೀಡಬೇಕು.
ಗ್ರಾಹಕರ ಡೇಟಾ ದುರ್ಬಳಕೆ ನಿಷೇಧ:
ಗ್ರಾಹಕರ ಸ್ಪಷ್ಟ ಒಪ್ಪಿಗೆಯಿಲ್ಲದೆ ಅವರ ವೈಯಕ್ತಿಕ ಮಾಹಿತಿ ಅಥವಾ ಶಾಪಿಂಗ್ ಇತಿಹಾಸದ ಡೇಟಾವನ್ನು ಕಂಪನಿಗಳು ತಮ್ಮದೇ ಆದ ಪ್ರೈವೇಟ್ ಲೇಬಲ್ ಉತ್ಪನ್ನಗಳನ್ನು ಪ್ರಮೋಟ್ ಮಾಡಲು ಬಳಸುವಂತಿಲ್ಲ. ಅಲ್ಲದೆ ಎಲ್ಲಾ ಇ-ಕಾಮರ್ಸ್ ಕಂಪನಿಗಳು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಪ್ರಕ್ರಿಯೆಯೊಂದಿಗೆ ಕಡ್ಡಾಯವಾಗಿ ಕೈಜೋಡಿಸಬೇಕಾಗಿದೆ.