

ನವದೆಹಲಿ: ಈಗಾಗಲೇ ಕೇಂದ್ರ ಸರ್ಕಾರ 2,000 ವರೆಗಿನ ಯುಪಿಐ ಹಾಗೂ ರೂಪೇ (RuPay) ಡೆಬಿಟ್ ಕಾರ್ಡ್ ವಹಿವಾಟುಗಳಿಗೆ ಯಾವುದೇ ಬ್ಯಾಂಕ್ ಅಥವಾ ಪಾವತಿ ಸಂಸ್ಥೆಗಳು ಶುಲ್ಕ ವಿಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಬ್ಯಾಂಕ್‌ಗಳು, ಸೇವಾ ಪೂರೈಕೆದಾರರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು, ವ್ಯಾಪಾರಿಗಳಿಗೆ 2,000 ರೂ.ಗಿಂತ ಹೆಚ್ಚಿನ ಮೊತ್ತದ UPI ಪಾವತಿಗಳ ಮೇಲೆ ಶುಲ್ಕ ವಿಧಿಸುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ.
UPI ಮತ್ತು ಸೇವೆಗಳ ಸ್ಟೀರಿಂಗ್ ಸಮಿತಿಯು 22 ಸದಸ್ಯರನ್ನು ಹೊಂದಿದ್ದು, ಇದರಲ್ಲಿ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್(IBA) ಮತ್ತು ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ (PCI) ಕೂಡ ಸೇರಿದೆ.
ಮೂಲಗಳ ಪ್ರಕಾರ, ಸ್ವಯಂ-ಸುಸ್ಥಿರತೆ ಮತ್ತು ಮಾರುಕಟ್ಟೆ ವಿಸ್ತರಣೆಯಂತಹ ವಿವಿಧ ಅಂಶಗಳನ್ನು ಪರಿಗಣಿಸಿ, 2,000 ರೂ.ಗಿಂತ ಹೆಚ್ಚಿನ UPI ವಹಿವಾಟುಗಳ ಮೇಲಿನ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ಕುರಿತು ಸಮಿತಿಯು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ.
ಉದಾಹರಣೆಗೆ, ಬ್ರೆಜಿಲ್‌ನ PIX ವ್ಯವಸ್ಥೆಯಲ್ಲಿ ವ್ಯಾಪಾರಿ ಶುಲ್ಕವು ಸುಮಾರು ಶೇ. 0.33 ರಷ್ಟಿದ್ದರೆ, ಚೀನಾದಲ್ಲಿ ಈ ಶುಲ್ಕವು ಶೇ. 0.40 ರಷ್ಟಿದೆ.
ವ್ಯಕ್ತಿಯಿಂದ ವ್ಯಾಪಾರಿಗೆ (person-to-merchant) ನಡೆಯುವ 2,000 ರೂ.ವರೆಗಿನ UPI ವಹಿವಾಟುಗಳು (RuPay ಡೆಬಿಟ್ ಕಾರ್ಡ್‌ಗಳ ಮೂಲಕ ನಡೆಯುವ ವಹಿವಾಟುಗಳೂ ಸೇರಿದಂತೆ) ಉಚಿತವಾಗಿರುತ್ತವೆ ಎಂದು ಸರ್ಕಾರ ಸೋಮವಾರ ತಿಳಿಸಿದೆ. ವ್ಯಕ್ತಿಯಿಂದ ವ್ಯಕ್ತಿಗೆ (person-to-person) ನಡೆಯುವ ಎಲ್ಲಾ UPI ವಹಿವಾಟುಗಳು ಕೂಡ ಉಚಿತವಾಗಿಯೇ ಮುಂದುವರಿಯಲಿವೆ.
ಸೆಪ್ಟೆಂಬರ್ 14 ರಂದು ಹೊರಡಿಸಲಾದ ಗೆಜೆಟ್ ಅಧಿಸೂಚನೆಯ ಪ್ರಕಾರ, RuPay ಡೆಬಿಟ್ ಕಾರ್ಡ್ ಅಥವಾ UPI ಮೂಲಕ 2,000 ರೂ.ವರೆಗಿನ ಪಾವತಿ ಮಾಡುವ ಅಥವಾ ಸ್ವೀಕರಿಸುವ ವ್ಯಕ್ತಿಯ ಮೇಲೆ ಯಾವುದೇ ಬ್ಯಾಂಕ್ ಅಥವಾ ವ್ಯವಸ್ಥೆ ಪೂರೈಕೆದಾರರು ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಶುಲ್ಕವನ್ನು ವಿಧಿಸುವಂತಿಲ್ಲ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷವಾದ ಕಾಂಗ್ರೆಸ್, UPI ವಹಿವಾಟುಗಳ ಕುರಿತಾದ ಸರ್ಕಾರದ ಅಧಿಸೂಚನೆಯನ್ನು ಟೀಕಿಸಿದ್ದು, ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸಲು ಸರ್ಕಾರವು ಪರೋಕ್ಷವಾಗಿ ದಾರಿ ಮಾಡಿಕೊಟ್ಟಿದೆ ಎಂದು ಆರೋಪಿಸಿದೆ.