ಕಚ್ಚಾ ತೈಲ ಬೆಲೆ ಇಳಿಕೆ ಎಫೆಕ್ಟ್; ಕೊನೆಗೂ ಪುಟಿದೆದ್ದ Indian Stock market, ಸೆನ್ಸೆಕ್ಸ್ 299 ಅಂಕ ಏರಿಕೆ!

ಬಿಎಸ್‌ಇ ಸೆನ್ಸೆಕ್ಸ್ 299.17 ಅಂಕ ಅಥವಾ ಶೇ.0.40ರಷ್ಟು ಏರಿಕೆಯಾಗಿ 74,828.25ಕ್ಕೆ ವಹಿವಾಟು ಮುಕ್ತಾಯಗೊಳಿಸಿತು. ದಿನದ ವಹಿವಾಟಿನ ವೇಳೆ ಸೆನ್ಸೆಕ್ಸ್ ಗರಿಷ್ಠ 444.66 ಅಂಕಗಳಷ್ಟು ಏರಿಕೆಯಾಗಿ 74,973.74ಕ್ಕೆ...
Crude oil prices (file photo)
ಕಚ್ಚಾ ತೈಲ ಬೆಲೆ ಏರಿಕೆ (ಸಾಂಕೇತಿಕ ಚಿತ್ರ)online desk
Updated on

ಮುಂಬೈ: ಕಳೆದ ಹಲವು ದಿನಗಳಿಂದ ಮಂಕಾಗಿದ್ದ ಭಾರತೀಯ ಷೇರುಮಾರುಕಟ್ಟೆ ಕೊನೆಗೂ ಚೇತರಿಕೆ ಕಂಡಿದ್ದು, ಮಾರುಕಟ್ಟೆಯ ಚೇತರಿಕೆಗೆ ಕಚ್ಚಾತೈಲ ಬೆಲೆ ಇಳಿಕೆ ಕಾರಣ ಎಂದು ಹೇಳಲಾಗಿದೆ.

ಹೌದು.. ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದು ಹಾಗೂ ಪಶ್ಚಿಮ ಏಷ್ಯಾದ ಉದ್ವಿಗ್ನತೆ ಕಡಿಮೆಯಾಗುವ ನಿರೀಕ್ಷೆ ಮೂಡಿರುವ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆಯಲ್ಲಿ ಬುಧವಾರ ಚೇತರಿಕೆ ಕಂಡುಬಂತು. ಸೆನ್ಸೆಕ್ಸ್ ಸುಮಾರು 300 ಅಂಕಗಳಷ್ಟು ಏರಿಕೆ ಕಂಡರೆ, ನಿಫ್ಟಿ 23,400ರ ಗಡಿ ದಾಟಿತು.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 299.17 ಅಂಕ ಅಥವಾ ಶೇ.0.40ರಷ್ಟು ಏರಿಕೆಯಾಗಿ 74,828.25ಕ್ಕೆ ವಹಿವಾಟು ಮುಕ್ತಾಯಗೊಳಿಸಿತು. ದಿನದ ವಹಿವಾಟಿನ ವೇಳೆ ಸೆನ್ಸೆಕ್ಸ್ ಗರಿಷ್ಠ 444.66 ಅಂಕಗಳಷ್ಟು ಏರಿಕೆಯಾಗಿ 74,973.74ಕ್ಕೆ ತಲುಪಿತ್ತು.

ಇದೇ ವೇಳೆ ಎನ್‌ಎಸ್‌ಇ ನಿಫ್ಟಿ50 117.80 ಅಂಕ ಅಥವಾ ಶೇ.0.50ರಷ್ಟು ಏರಿಕೆಯಾಗಿ 23,446.80ಕ್ಕೆ ವಹಿವಾಟು ಅಂತ್ಯಗೊಳಿಸಿತು. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳೂ ಸುಮಾರು ಶೇ.0.8ರಷ್ಟು ಏರಿಕೆ ಕಂಡವು.

ಮಂಗಳವಾರ ಸೆನ್ಸೆಕ್ಸ್ 329.91 ಅಂಕ ಮತ್ತು ನಿಫ್ಟಿ 85.30 ಅಂಕ ಕುಸಿದಿದ್ದವು. ಇದರ ಬೆನ್ನಲ್ಲೇ ಬುಧವಾರದ ಏರಿಕೆ ಮಾರುಕಟ್ಟೆಗೆ ಕೊಂಚ ಚೇತರಿಕೆಯ ವಾತಾವರಣ ತಂದಿದೆ.

Crude oil prices (file photo)
ಹರಿದು ಹೋಗಲ್ಲ, ಮಣ್ಣಾಗಲ್ಲ: ಶೀಘ್ರದಲ್ಲೇ ಬರಲಿವೆ 10 ಮತ್ತು 20 ರೂಪಾಯಿಯ ಪ್ಲಾಸ್ಟಿಕ್ ನೋಟುಗಳು!

ಕಚ್ಚಾ ತೈಲ ಬೆಲೆ ಇಳಿಕೆ

ಭಾರತೀಯ ಷೇರುಪೇಟೆಯ ಚೇತರಿಕೆಗೆ ಕಚ್ಚಾ ತೈಲ ಬೆಲೆ ಇಳಿಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕೆಳಗೆ ಕುಸಿದಿದ್ದು, ಸುಮಾರು 99.60 ಡಾಲರ್‌ಗೆ ವಹಿವಾಟು ನಡೆಸಿತು.

ಭಾರತ ತನ್ನ ಕಚ್ಚಾ ತೈಲದ ಅಗತ್ಯದ ದೊಡ್ಡ ಭಾಗವನ್ನು ಆಮದು ಮಾಡಿಕೊಳ್ಳುವುದರಿಂದ, ತೈಲ ಬೆಲೆ ಇಳಿಕೆಯು ಹಣದುಬ್ಬರ, ಚಾಲ್ತಿ ಖಾತೆ ಕೊರತೆ ಹಾಗೂ ಕಂಪನಿಗಳ ವೆಚ್ಚದ ಮೇಲಿನ ಒತ್ತಡವನ್ನು ತಗ್ಗಿಸಲು ನೆರವಾಗಬಹುದು. ಪಶ್ಚಿಮ ಏಷ್ಯಾದ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳದಿರಬಹುದು ಎಂಬ ನಿರೀಕ್ಷೆಯೂ ಮಾರುಕಟ್ಟೆಯ ಭಾವನೆಗೆ ಬೆಂಬಲ ನೀಡಿತು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೆಟಲ್ ಷೇರುಗಳಿಗೆ ಬೇಡಿಕೆ

ಹಲವು ವಲಯಗಳ ಷೇರುಗಳಲ್ಲಿ ಖರೀದಿ ಕಂಡುಬಂತು. ನಿಫ್ಟಿ ಮೆಟಲ್ ಸೂಚ್ಯಂಕ ಶೇ.2.37ರಷ್ಟು ಏರಿಕೆ ಕಂಡು ಪ್ರಮುಖ ಲಾಭದಾಯಕ ವಲಯವಾಗಿ ಹೊರಹೊಮ್ಮಿತು. ಉಳಿದಂತೆ ಎಫ್‌ಎಂಸಿಜಿ, ಪಿಎಸ್‌ಯು ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳು ಮತ್ತು ರಿಯಾಲ್ಟಿ ಷೇರುಗಳಲ್ಲೂ ಏರಿಕೆ ಕಂಡುಬಂತು. ಆದರೆ ಐಟಿ ವಲಯದ ಷೇರುಗಳು ಒತ್ತಡದಲ್ಲಿದ್ದವು

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಜೊಮ್ಯಾಟೊ ಸುಮಾರು ಶೇಕಡಾ 7 ರಷ್ಟು ಏರಿಕೆಯೊಂದಿಗೆ ಭಾರಿ ಮುನ್ನಡೆ ಸಾಧಿಸಿದ್ದರೆ, ಉಳಿದಂತೆ ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಐಟಿಸಿ, ಅಲ್ಟ್ರಾಟೆಕ್ ಸಿಮೆಂಟ್, ಪವರ್ ಗ್ರಿಡ್ ಮತ್ತು ಲಾರ್ಸನ್ & ಟೂಬ್ರೊ (ಎಲ್ ಅಂಡ್ ಟಿ) ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಎಚ್‌ಸಿಎಲ್ ಟೆಕ್, ಇನ್ಫೋಸಿಸ್ ಮತ್ತು ಟಿಸಿಎಸ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.

ಭಾರತದ ಆರ್ಥಿಕ ಬೆಳವಣಿಗೆ ನಿರೀಕ್ಷೆ

ಭಾರತದ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ಧನಾತ್ಮಕ ನಿರೀಕ್ಷೆಗಳೂ ಹೂಡಿಕೆದಾರರ ಭಾವನೆಗೆ ಬೆಂಬಲ ನೀಡಿವೆ. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್, ಎಸ್‌&ಪಿ, ಫಿಚ್ ಮತ್ತು ಒಇಸಿಡಿ ಸಂಸ್ಥೆಗಳು FY27ರಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಸುಮಾರು ಶೇ.7ಕ್ಕೆ ಹೆಚ್ಚಿಸಿವೆ. ದೇಶೀಯ ಬೇಡಿಕೆ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿನ ಸ್ಥಿರತೆಯನ್ನು ಇದಕ್ಕೆ ಕಾರಣವೆಂದು ಉಲ್ಲೇಖಿಸಲಾಗಿದೆ.

ಆದರೆ ವಿದೇಶಿ ಹೂಡಿಕೆದಾರರ ಮಾರಾಟ ಇನ್ನೂ ಮಾರುಕಟ್ಟೆಗೆ ಸವಾಲಾಗಿದೆ. ಮಂಗಳವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) 3,809.99 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳು, ಪಶ್ಚಿಮ ಏಷ್ಯಾದ ಪರಿಸ್ಥಿತಿ, ಕಚ್ಚಾ ತೈಲ ಬೆಲೆ, ವಿದೇಶಿ ಹೂಡಿಕೆ ಹರಿವು ಮತ್ತು ಮುಂಬರುವ ಆರ್ಥಿಕ ಅಂಕಿಅಂಶಗಳು ಮುಂದಿನ ದಿನಗಳಲ್ಲಿ ಭಾರತೀಯ ಷೇರುಪೇಟೆಯ ಚಲನೆಗೆ ಪ್ರಮುಖ ಅಂಶಗಳಾಗಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com