

ಮತ್ತೊಂದು ಬಾಲಿವುಡ್ ಜೋಡಿ ಹಸೆಮಣೆ ಏರಲು ಮುಹೂರ್ತ ಹುಡುಕುತ್ತಿದೆ. ಅದು ಸೋಹಾ ಅಲಿ ಖಾನ್ ಮತ್ತು ಕುನಾಲ್ ಖೇಮು. ಆರು ತಿಂಗಳ ಹಿಂದೆ ಸೋಹಾ ಸೋದರ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ದಾಂಪತ್ಯಕ್ಕೆ ಅಡಿ ಇಟ್ಟಾಗಲೇ ಇವರ ಮದುವೆ ಮಾತು ಅಲ್ಲಲ್ಲಿ ಕೇಳಿ ಬಂದಿತ್ತು. 'ನನಗಂತೂ ಸದ್ಯ ಮದುವೆ ಇರಾದೆ ಇಲ್ಲಪ್ಪ' ಎಂದು ಕೆಂಪು ಕೆನ್ನೆ ಊದಿಸಿಕೊಂಡಿದ್ದಳು ಸೋಹಾ. ಈಗ 'ನಾವಿಬ್ಬರೂ ಮದುವೆ ಆಲೋಚನೆ ಮಾಡುತ್ತಿದ್ದೇವೆ' ಎನ್ನುವುದಾಗಿ ಬಾಯ್ಬಿಟ್ಟಿರುವುದು ಸ್ವತಃ ಖೇಮು.
ಇವರಿಬ್ಬರೂ ಒಂದು ವರ್ಷಕ್ಕೂ ಅಧಿಕ ಕಾಲದಿಂದ ಡೇಟಿಂಗ್ನಲ್ಲಿದ್ದರು. ಈಗ ತಮ್ಮ ಸಂಬಂಧ ಬಹಿರಂಗಪಡಿಸಿರುವ ಆತ, 'ನಮ್ಮಿಬ್ಬರ ರಿಲೇಶನ್ಶಿಪ್ನಲ್ಲಿ ಯಾವುದೇ ತೊಂದರೆ ಇಲ್ಲ' ಎಂದೂ ಹೇಳಿಕೊಂಡಿದ್ದಾನೆ.