ರಾಣಿ ಮುಖರ್ಜಿ ಎನ್ನುವ ಬೆಂಗಾಲಿ ಬ್ಯೂಟಿ ಕೊನೆಗೂ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ. ನಿರ್ಮಾಪಕ ಆದಿತ್ಯ ಚೋಪ್ರಾ ಜತೆ ರಾಣಿಯ ಕುಚ್ ಕುಚ್ ನಡೀತಿದೆ ಎಂದು ಮಾಧ್ಯಮಗಳಲ್ಲಿ ಬಂದಾಗ ತುಟಿ ಎರಡು ಮಾಡಿರಲಿಲ್ಲ ಈಕೆ. ಒಂದು ವರ್ಷದ ಹಿಂದೆ ಅಂದರೆ 2012ರ ಜನವರಿಯಲ್ಲಿ ಆದಿತ್ಯ ಜತೆ ವಿದೇಶದಿಂದ ವಾಪಸ್ಸಾಗುತ್ತಿದ್ದಾಗ ಈ ಜೋಡಿಯನ್ನು ಪ್ಯಾಪರಾಜಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ 'ಸೆರೆ' ಹಿಡಿದಿದ್ದರು. ಆಗ ತಮ್ಮ ಆಗಮನವನ್ನು ಬಹಿರಂಗಗೊಳಿಸಿದ್ದು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಎಂದು ಸಿಕ್ಕಾಪಟ್ಟೆ ಗರಂ ಆಗಿದ್ದ ರಾಣಿ, ಈ ಬಗ್ಗೆ ತನಿಖೆ ನಡೆಸುವಂತೆಯೂ ಒತ್ತಾಯಿಸಿದ್ದಳು. ಮೊನ್ನೆಮೊನ್ನೆ ಅದೇ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಮತ್ತೆ ರಾಣಿ ಮುಖರ್ಜಿ- ಆದಿತ್ಯ ಚೋಪ್ರಾ ಜೋಡಿಯನ್ನು ಛಾಯಾಗ್ರಾಹಕರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಯೂಟ್ಯೂಬ್ ಸೇರಿದಂತೆ ಅನೇಕ ಅಂತರ್ಜಾಲ ತಾಣಗಳಲ್ಲಿ ಈಗ ಈ ವಿಡಿಯೋ ಹರಿದಾಡುತ್ತಿದೆ.