

ಹಿರಿಯ ಸಂಗೀತ ನಿರ್ದೇಶಕ ಮತ್ತು ಗಾಯಕ ಇಳಯರಾಜಾ ಅವರ ಮಗ ಯುವನ್ ಶಂಕರ್ ರಾಜಾ ಬಾಲಿವುಡ್ ಪ್ರವೇಶಿಸುವುದು ಬಹುತೇಕ ನಿಶ್ಚಿತವಾಗಿದೆ. ಇಮ್ರಾನ್ ಹಶ್ಮಿ ನಟನೆಯ ಮುಂದಿನ ಸಿನಿಮಾಕ್ಕೆ ಯುವನ್ದೇ ಸಂಗೀತ ಸಂಯೋಜನೆ. ಕುನಾಲ್ ದೇಶಮುಖ್ ಈ ಚಿತ್ರದ ನಿರ್ದೇಶಕ. 26ರ ಹರೆಯದ ಯುವನ್ ತಮಿಳು ಚಿತ್ರೋದ್ಯಮದಲ್ಲಿ ಈಗಾಗಲೇ ಸಂಗೀತ ನಿರ್ದೇಶಕನಾಗಿ ಹೆಸರು ಮಾಡಿರುವ ಪ್ರತಿಭೆ. ಹತ್ತಿರಹತ್ತಿರ 100 ಸಿನಿಮಾಗಳು ಈ ತರುಣ ಸಂಗೀತ ಸಂಯೋಜಿಸಿರುವ ಚಿತ್ರಗಳ ಪಟ್ಟಿಯಲ್ಲಿವೆ. ತಮಿಳಿನಿಂದ ಹಾಲಿವುಡ್ವರೆಗೆ ಸಾಗಿದ ಎ.ಆರ್. ರೆಹಮಾನ್ ಜತೆ ಯುವನ್ ಹೋಲಿಸಲಾಗುತ್ತಿದೆ. 'ರೆಹಮಾನ್ ಸಂಗೀತದಂತೆಯೇ ಯುವನ್ ಸಂಗೀತದಲ್ಲೂ ಎಲ್ಲರನ್ನೂ ತಟ್ಟಬಲ್ಲ ಶಕ್ತಿ ಇದೆ' ಎನ್ನುವ ಮಾತು ಬಾಲಿವುಡ್ನಲ್ಲೂ ಕೇಳಿಬರುತ್ತಿದೆ.