

'ಕೋಯಿ ಮಿಲ್ ಗಯಾ...', 'ಕ್ರಿಶ್' ಬಳಿಕ 'ಕ್ರಿಶ್ 3'ಯಲ್ಲಿ ತೊಡಗಿಕೊಂಡಿದ್ದ ಹೃತಿಕ್ ರೋಶನ್ಗೆ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಸದ್ದಿಲ್ಲದೆ ಮೆದುಳಿನ ಶಸ್ತ್ರಚಿಕಿತ್ಸೆ ನಡೆದಿದೆ. ವರ್ಷದ ಹಿಂದೆ ಚಿತ್ರೀಕರಣ ಸಂದರ್ಭದಲ್ಲಿ ತಲೆಗೆ ಏಟು ಮಾಡಿಕೊಂಡಿದ್ದ ಹೃತಿಕ್, 'ಸಬ್ಡ್ಯೂರಲ್ ಹೆಮಟೊಮಾ'ದಿಂದ ಬಳಲುತ್ತಿದ್ದರು. ಅಂದರೆ ಮೆದುಳಿನಲ್ಲಿ ಸದಾ ಸಣ್ಣ ಗಾಯವಿದ್ದು, ಅದರಿಂದ ರಕ್ತಸ್ರಾವ ಆಗಬಹುದು ಅಥವಾ ರಕ್ತ ಹೆಪ್ಪುಗಟ್ಟಬಹುದು. ಹಿಂದೂಜಾ ಆಸ್ಪತ್ರೆ ತಜ್ಞರು 50 ನಿಮಿಷಗಳ ಯಶಸ್ವಿ ಸರ್ಜರಿ ನಡೆಸಿ ತೊಂದರೆ ನಿವಾರಿಸಿದ್ದಾರೆ. 'ಮಗ ಚೇತರಿಸಿಕೊಳ್ಳುತ್ತಿದ್ದು, ಗಾಬರಿ ಪಡುವಂಥದ್ದೇನಿಲ್ಲ' ಹೃತಿಕ್ ತಂದೆ ಹಾಗೂ ಚಿತ್ರ ನಿರ್ಮಾಪಕ ರಾಕೇಶ್ ರೋಶನ್ ತಿಳಿಸಿದ್ದಾರೆ.