ಪಿಂಕ್ ಶಾಹಿ!

ಪಿಂಕ್ ಶಾಹಿ!
Updated on: 

ಬಣ್ಣದ ಲೋಕದಲ್ಲಿ ಪ್ರೇಮ ಸಂಬಂಧಗಳು ಚಿಗುರುವುದು, ಕಮರುವುದು ಎರಡೂ ಮಾಮೂಲು. ಜಾನ್ ಅಬ್ರಹಾಂ- ಬಿಪಾಶಾ, ದೀಪಿಕಾ ಪಡುಕೋಣೆ- ರಣಬೀರ್ ಕಪೂರ್, ಸಲ್ಮಾನ್ ಖಾನ್- ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ- ಶಾಹೀದ್ ಕಪೂರ್... ಬೇಕಾದಷ್ಟು ಜೋಡಿಗಳು. ಒಬ್ಬರೊಂದಿಗೆ ಸಂಬಂಧ ಹಳಸುತ್ತಿದ್ದಂತೆ ಮತ್ತೊಬ್ಬರ ತೆಕ್ಕೆಗೆ ಬೀಳುವುದೂ ಅಲ್ಲಿ ಹೊಸತಲ್ಲ. ಆದರೆ ಹಳೆ ಜೋಡಿ ಮಧ್ಯೆ ಹೊಸ ಬೆಸುಗೆಗಳ ಕಥೆ ಸ್ವಲ್ಪ ಅಪರೂಪವೇ.
ಪ್ರಿಯಾಂಕಾ ಚೋಪ್ರಾ ಮತ್ತು ಶಾಹೀದ್ ಕಪೂರ್ ಮತ್ತೆ ಒಂದಾಗಿದ್ದಾರೆ ಎನ್ನುವ ಗುಸುಗುಸು ಬಿ ಟೌನ್ ಅಂಗಳದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ವರ್ಷಗಳ ಹಿಂದೆ 'ಕಮೀನೆ' ಚಿತ್ರೀಕರಣದ ವೇಳೆ ಇಬ್ಬರ ನಡುವೆ 'ಕುಚ್‌ಕುಚ್‌' ಆಗಿತ್ತು. ಗುಟ್ಟುಗುಟ್ಟಾಗಿ ನಡೆಯುತ್ತಿದ್ದ ಪಾರ್ಟಿಗಳ ಸಮಾಚಾರ ಜಗಜ್ಜಾಹೀರಾದಾಗ ಇಬ್ಬರೂ ತಮ್ಮ ಸಂಬಂಧ ಒಪ್ಪಿಕೊಂಡಿದ್ದರು. ನಂತರ ಏನೇನೋ ಕಾರಣಗಳಿಂದಾಗಿ ಬೇರ್ಪಟ್ಟರು. ಶಾಹೀದ್ ಹೆಸರು ಆ ನಂತರದಲ್ಲಿ ನರ್ಗೀಸ್ ಫಕ್ರಿ, ದೀಪಿಕಾ ಪಡುಕೋಣೆ ಸೇರಿದಂತೆ ಕೆಲವು ಸುಂದರಿಯರ ಹೆಸರಿನೊಂದಿಗೆ ಕೇಳಿಬಂದಿತ್ತು. ಈಗಿನ ವರ್ತಮಾನ ಏನೆಂದರೆ ಹಳೆ ಜೋಡಿ ಮತ್ತೆ ಒಂದಾಗಿದೆ. ಪ್ರಿಯಾಂಕಾ- ಶಾಹೀದ್ ಮಧ್ಯೆ ಪ್ರೇಮ ಮರುಕಳಿಸಿದೆ!
ಮುಂಬೈನ ಜುಹು ಪ್ರದೇಶದಲ್ಲಿರುವ ಪ್ರತಿಷ್ಠಿತ ಹೋಟೆಲ್‌ನಲ್ಲಿ ಪ್ರಿಯಾಂಕಾ- ಶಾಹೀದ್ ಇತ್ತೀಚೆಗೆ ಜತೆಯಾಗಿ ಡಿನ್ನರ್ ಮಾಡಿದ್ದಾರೆ. ಬಾಲಿವುಡ್‌ನ ಗಾಸಿಪ್ ಸಂಶೋಧಕರಿಗೆ ಅದು ಹೇಗೋ ಗೊತ್ತಾಗಿದೆ. ಹೋಟೆಲ್ ಪತ್ತೆ ಮಾಡಿ ಅಲ್ಲಿನ ಸಿಬ್ಬಂದಿ ವಿಚಾರಿಸಿದ್ದಾರೆ. 'ಇಬ್ಬರೂ ಜತೆಯಾಗಿ ಬಂದರು. ಸಂತೋಷದಿಂದ ಒಂದೆರಡು ಗಂಟೆ ಕಳೆದರು. ನಗುನಗುತ್ತ ಒಟ್ಟಾಗಿಯೇ ಹೋದರು. ಪ್ರಿಯಾಂಕಾ ಜಾಸ್ತಿ ತಿನ್ನಲಿಲ್ಲ, ಆದರೆ ಶಾಹೀದ್ ಜತೆ ಖುಷಿಯಿಂದ ಇದ್ದರು' ಎಂದು ಹೋಟೆಲ್ ನೌಕರರು ಹೇಳಿದ್ದಾರೆ. ಅದಕ್ಕೆ ಪೂರಕವಾಗಿ 'ಕಮೀನೆ' ನಿರ್ಮಿಸಿದ್ದ ಮುಬಿನಾ ರುತ್ತೋನ್ಸೇಯ್ ಹುಟ್ಟುಹಬ್ಬದ ಪಾರ್ಟಿಯಲ್ಲೂ ಇಬ್ಬರೂ ಬೆಳಗಿನ ಜಾವದವರೆಗೂ ಇಬ್ಬರೂ ಒಟ್ಟಾಗಿಯೇ ಇದ್ದರು.
'ಪ್ರಿಯಾಂಕಾ ತಂದೆಯ ಸಾವಿನ ನಂತರ ಶಾಹೀದ್ ಸಿಕ್ಕಾಪಟ್ಟೆ ಬದಲಾಗಿದ್ದಾರೆ. ಪ್ರಿಯಾಂಕಾ ಕೂಡ ಶಾಹೀದ್ ವಿಚಾರದಲ್ಲಿ ಮೃದುವಾಗಿದ್ದಾರೆ' ಎನ್ನುತ್ತವೆ ಇಬ್ಬರಿಗೂ ಆಪ್ತರಾಗಿರುವ ಮೂಲಗಳು.

= ರಾಜೇಶ ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com