

'ನನಗೆ ಝೀರೊ ಸೈಜ್ನಲ್ಲಿ ನಂಬಿಕೆ ಇಲ್ಲ' ಅಂತ ಮತ್ತೆ ಹೇಳಿದ್ದಾಳೆ ಪ್ರಿಯಾಂಕಾ ಚೋಪ್ರಾ. ಹಾಗಂತ ವರ್ಕೌಟ್ ಮಾಡದೆ ಇರಬೇಕು ಅಂತಲ್ಲ. ಸಿಕ್ಕಾಪಟ್ಟೆ ಡಯಟ್ ಮಾಡಿ, ತೂಕ ಇಳಿಸಿಕೊಂಡು, ಝೀರೊ ಸೈಜ್ ಫಿಗರ್ ಅಂತ ಕರೆಸಿಕೊಳ್ಳೋದಕ್ಕಿಂತ ಇಷ್ಟವಾದದ್ದನ್ನು ಮಿತವಾಗಿ ತಿಂದು, ನಿಯಮಿತವಾಗಿ ವ್ಯಾಯಾಮ ಮಾಡುತ್ತ ಅಂಗಾಂಗಗಳ ಅಂದ ಕಾಪಾಡಿಕೊಳ್ಳಬೇಕು ಎನ್ನುವುದು ಅವಳ ಸಲಹೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಲಿರುವ, ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್ ಜೀವನ ಆಧಾರಿತ ಚಿತ್ರಕ್ಕಾಗಿ ಪ್ರಿಯಾಂಕಾ ತಯಾರಿ ಮಾಡುತ್ತಿದ್ದಾಳೆ. ಈ ಹಿನ್ನೆಲೆಯಲ್ಲೇ ಪತ್ರಕರ್ತರು ಅವಳಿಗೆ ಝೀರೊ ಸೈಜ್ ಪ್ರಶ್ನೆ ಎಸೆದದ್ದು, ಅದಕ್ಕೆ ಆಕೆ ಮತ್ತೊಮ್ಮೆ ಖಡಕ್ ಆಗಿ ಉತ್ತರಿಸಿದ್ದು. 'ನಾನು ಮೆರಿ ಕೋಮ್ ಥರ ಕಾಣಲಾರೆ. ಆದರೆ ಆಕೆಗಿರುವಂತೆ ನನ್ನ ಮಾಂಸಖಂಡಗಳೂ ಎದ್ದುಕಾಣುವಂತೆ ಮಾಡಲು ವಿಶೇಷ ಕಸರತ್ತುಗಳನ್ನಂತೂ ಮಾಡುತ್ತಿದ್ದೇನೆ' ಎಂದಿದ್ದಾಳೆ ಪ್ರಿಯಾಂಕಾ.