

ಸಂಜೂ ಬಾಬಾ ಸಿಕ್ಕಾಪಟ್ಟೆ ಫೀಲಿಂಗ್ ನಲ್ಲಿದ್ದಾನೆ. ಇಡೀ ಬಾಲಿವುಡ್ ತನಗೆ ದ್ರೋಹ ಬಗೆದಿದೆ ಎನ್ನುವುದು ಮುನ್ನಾಭಾಯಿಯ ಅಸಮಾಧಾನ. ಮುಂಬೈ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸಾಬೀತಾಗಿ, ಐದು ವರ್ಷ ಶಿಕ್ಷೆಯೂ ಆಗಿದೆ. ನ್ಯಾಯಾಲಯದ ಮುಂದೆ ಶರಣಾಗಲು ಕೆಲವೇ ದಿನಗಳು ಉಳಿದಿವೆ. ಒಪ್ಪಿಕೊಂಡಿದ್ದ ಚಿತ್ರಗಳನ್ನು ಮುಗಿಸಲು ದತ್ ಹಗಲಿರುಳೆನ್ನದೆ ದುಡಿಯುತ್ತಿದ್ದಾನೆ. ಆದರೆ ತನ್ನ ಬಗ್ಗೆ ಕೆಲವು ಸಹ ನಟರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ಆತನಿಗೆ ನೋವುಂಟು ಮಾಡಿದೆ. '30 ದಿನಗಳ ಕೆಲಸಕ್ಕಾಗಿ ನಾನು ಯಾರಿಂದಲೂ ನಯಾಪೈಸೆ ಪಡೆಯುತ್ತಿಲ್ಲ. ಅದಕ್ಕಾಗಿ ನನಗೆ ಸಿಕ್ಕ ಪ್ರತಿಫಲವೇನು? ದ್ರೋಹ. ಸಂಜಯ್ ಮನೆಯಲ್ಲಿ ತಣ್ಣಗೆ ಕುಳಿತಿದ್ದಾನೆ ಎಂದು ಕೆಲವು ಸಹ ನಟರೇ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಾರೆ' ಎಂದು ವಿಷಾದದಿಂದ ಹೇಳಿಕೊಂಡಿದ್ದಾನೆ ಸಂಜೂ ಬಾಬಾ.