

ಕರ್ನಾಟಕದಲ್ಲಂತೂ ಗುಟ್ಕಾ ಬ್ಯಾನ್ ಆಗಿದೆ. ಆದರೆ ಬಾಲಿವುಡ್ನಲ್ಲಿ 'ಗುಟ್ಕಾ' ಇನ್ನೇನು ಲಾಂಚ್ ಆಗಲಿದೆ ಎಂಬುದು ಲೇಟೆಸ್ಟ್ ಸುದ್ದಿ. ಇದೇನಿದು ಬಾಲಿವುಡ್ನಲ್ಲಿ ಗುಟ್ಕಾ? ಎಂದುಕೊಳ್ಳಬೇಡಿ. ಸದ್ಯಕ್ಕೆ 'ಇದು ಆ ಗುಟ್ಕಾನೇನಾ?' ಎಂಬ ಪ್ರಶ್ನೆಗೆ ಉತ್ತರಗಳೂ ಇಲ್ಲ. ಆದರೆ ಇದು ನಿರ್ದೇಶಕ ಪುನೀತ್ ಮಲ್ಹೋತ್ರಾ ಅವರ ಹೊಸ ಚಿತ್ರದ ಹೆಸರು. ಈ ಚಿತ್ರಕ್ಕೆ ಪುನೀತ್ ಬಾಲಿವುಡ್ನ ಲೇಟೆಸ್ಟ್ 'ಬಾಸ್' ಅಕ್ಷಯ್ ಕುಮಾರ್ ಅವರನ್ನು ನಾಯಕರನ್ನಾಗಿಸಿದ್ದಾರೆ. ಒಂದು ವೇಳೆ ಇದು ಅದೇ ಗುಟ್ಕಾ ಆದರೂ ಕೂಡ ಬಾಲಿವುಡ್ನಲ್ಲಿ ಈ ಶೀರ್ಷಿಕೆಗೆ ಯಾವ ತೊಂದರೆಯೂ ಆಗಲಿಕ್ಕಿಲ್ಲ ಬಿಡಿ. ಏಕೆಂದರೆ ಕರ್ನಾಟಕದಲ್ಲಿರುವಂಥ ಟೈಟಲ್ ರಿಜಿಸ್ಟರ್ ಸಮಸ್ಯೆ ಆಗಲೀ, ಸೆನ್ಸಾರ್ ಮಂಡಳಿಯ ತಕರಾರುಗಳಾಗಲೀ ಅಲ್ಲಿಲ್ಲವಲ್ಲ. ಆದರೆ ಗುಟ್ಕಾ ಚಿತ್ರಕ್ಕೂ ಮುಂಚೆ, 'ಐ ಹೇಟ್ ಲವ್ ಸ್ಟೋರೀಸ್' ಚಿತ್ರದ ಮೂಲಕ ಹೆಸರು ಮಾಡಿದ ಪುನೀತ್ ಸದ್ಯಕ್ಕೆ ಇಮ್ರಾನ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ 'ಗೋರೀ ತೇರೇ ಪ್ಯಾರ್ ಮೇ' ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಅದರ ನಡುವೆಯೇ ಗುಟ್ಕಾ ಚಿತ್ರದ ಘೋಷಣೆ ಮಾಡಿರುವ ಪುನೀತ್ ಇದು ನಾನು ಮಾಡಿರುವ ಮೊದಲೆರಡು ಚಿತ್ರಗಳಿಗೂ ಭಿನ್ನವಾದದ್ದು. ಆದರೆ ಚಿತ್ರದ ಬಗ್ಗೆ ಈಗಲೇ ಏನನ್ನಾದರೂ ಹೇಳುವುದು ಅವಸರವಾದೀತು. ಏಕೆಂದರೆ ಇನ್ನೂ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಇನ್ನೂ ಚಿತ್ರದನಾಯಕಿಯ ಆಯ್ಕೆಯನ್ನೂ ಮಾಡಿಲ್ಲ ಎನ್ನುತ್ತಾರೆ. ಹಾಗಾಗಿ ಸದ್ಯಕ್ಕೆ ನವೆಂಬರ್ 22ರಂದು ಬಿಡುಗಡೆಯಾಗಲಿರುವ ಅವರ ಚಿತ್ರ 'ಗೋರಿ ತೇರೇ ಪ್ಯಾರ್ ಮೇ' ಚಿತ್ರದ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ ಪುನೀತ್. ಮೊದಲ ಚಿತ್ರದಲ್ಲಿ 'ಐ ಹೇಟ್ ಲವ್ಸ್ಟೋರೀಸ್' ಎಂದಿದ್ದ ಪುನೀತ್ ಈಗ ಇಮ್ರಾನ್, ಕರೀನಾ ಜೋಡಿಯ ಲವ್ಸ್ಟೋರಿಯನ್ನೇ ಹೇಳಲು ಹೊರಟಿದ್ದಾರೆ. ಈ ಚಿತ್ರದಲ್ಲಿ ಕರೀನಾ ಇಮ್ರಾನ್ಗಿಂತ ದೊಡ್ಡವಳು ಎನ್ನುವುದನ್ನು ಪರಿಣಾಮಕಾರಿಯಾಗಿ ತೋರಿಸಿದ್ದೇನೆ. ಇದೊಂದು ಅಪರೂಪದ ಜೋಡಿ ಎನಿಸಿಕೊಳ್ಳಲಿದೆ. ಐ ಹೇಟ್ ಲವ್ ಸ್ಟೋರೀಸ್ನ ನಂತರ ನಾನು ಮತ್ತೆ ಇಮ್ರಾನ್ ಜೊತೆಗೇ ಸಿನಿಮಾ ಮಾಡಲು ಬಯಸಿದ್ದೆ. ಅವರನ್ನು ತಲೆಯಲ್ಲಿಟ್ಟುಕೊಂಡೇ ಸ್ಕ್ರಿಪ್ಟ್ ಬರೆದಿದ್ದೆ. ಇನ್ನು ಚಿತ್ರದ ನಾಯಕಿಯ ವಿಷಯಕ್ಕೆ ಬಂದರೆ ಈ ಪಾತ್ರವನ್ನು ಮಾಡುವುದು ಕೇವಲ ಕರೀನಾಗೆ ಮಾತ್ರ ಸಾಧ್ಯವಿತ್ತು ಎನ್ನುತ್ತಾರೆ ಪುನೀತ್. ಅಂದಹಾಗೆ ಚಿತ್ರದಲ್ಲಿ ಕರೀನಾ ಸಾಮಾಜಿಕ ಕಾರ್ಯಕರ್ತೆಯಾಗಿ ಕಾಣಿಸಿಕೊಂಡಿದ್ದಾರಂತೆ.
- ಹರಿ