

ಚಿತ್ರೀಕರಣದ ವೇಳೆ ತಾಂತ್ರಿಕ ಸಿಬ್ಬಂದಿ ಎಚ್ಚರಿಕೆಯಲ್ಲೇ ಇರುತ್ತಾರೆ. ಆದರೂ ಸಣ್ಣಪುಟ್ಟ ಎಡವಟ್ಟುಗಳು ಘಟಿಸಿ ಹೋಗುತ್ತವೆ. ಕೆಲವೊಮ್ಮೆ ಕಲಾವಿದರು ಗಾಯಗೊಳ್ಳುವುದೂ ಉಂಟು. ಅದರಲ್ಲೂ ಸಾಹಸ ಸನ್ನಿವೇಶಗಳನ್ನು ಸೆರೆ ಹಿಡಿಯುವಾಗ ಎಷ್ಟು ಎಚ್ಚರದಿಂದ ಇದ್ದರೂ ಸಾಲದು. ಅಜಯ್ ದೇವಗನ್ ಮತ್ತು ಸೋನಾಕ್ಷಿ ಸಿನ್ಹಾ ನಟಿಸುತ್ತಿರುವ ಹಿಂದಿ ಚಿತ್ರದ ಚಿತ್ರೀಕರಣದ ವೇಳೆಯಲ್ಲೂ ಮೊನ್ನೆಮೊನ್ನೆ ಇಂತಹ ಅವಘಡ ನಡೆದಿದೆ. ಸೋನಾಕ್ಷಿ ತನ್ನ ಮುಷ್ಟಿಯಲ್ಲಿ ಹಿಟ್ಟು ಹಿಡಿದುಕೊಂಡು ದೇವಗನ್ನತ್ತ ತೂರುವ ದೃಶ್ಯ. ಒಂದು ಟೇಕ್ನಲ್ಲಿ ಹಿಟ್ಟು ನೇರವಾಗಿ ಆತನ ಕಣ್ಣಿಗೆ ಬಿದ್ದಿದೆ. ಉರಿಯಿಂದ ತತ್ತರಿಸಿದ ನಾಯಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು ಎನ್ನಿ. ಆದರೆ ಚೇತರಿಸಿಕೊಳ್ಳಲು ದೇವಗನ್ಗೆ ಎರಡು ದಿನ ಬೇಕಾಯಿತಂತೆ.