

ಆ ಬಾನು ಈ ಭೂಮಿ ಎಂಬ ಮರೆತು ಹೋದ ಚಿತ್ರದಲ್ಲಿ ನೆನಪಲ್ಲುಳಿಯುವ ಅಭಿನಯ ನೀಡಿದ್ದ ಸರಣ್ಯಾ ಮೋಹನ್‌ಗೆ ಅದೃಷ್ಟ ಖುಲಾಯಿಸಿದೆ. ಅದಕ್ಕೆ ಕಾರಣ ಈ ಚಿತ್ರವೇನಲ್ಲ. ರಾಜ್ಯ ಪ್ರಶಸ್ತಿ ಪಡೆದ ಈ ಚಿತ್ರ ಆಕೆಗೆ ದೊಡ್ಡ ಲಾಭವೇನೂ ತರಲಿಲ್ಲ.
ಇತ್ತೀಚೆಗೆ ಪರಮಶಿವ ಚಿತ್ರದಲ್ಲಿ ರವಿಚಂದ್ರನ್ ತಂಗಿಯಾಗಿ ಮತ್ತೊಮ್ಮೆ ಅಮೋಘ ಅಭಿನಯ ನೀಡಿದರೂ ಚಿತ್ರ ಶಿವಾ ಅಂತ ಕೊನೆಯುಸಿರೆಳೆದಿದೆ. ಆಕೆಯ ತಮಿಳು, ತೆಲುಗು ಚಿತ್ರಗಳು ಬಾಲಿವುಡ್ಡಿಗೆ ಎಂಟ್ರಿ ಕೊಡಿಸುವಲ್ಲಿ ಯಶಸ್ವಿಯಾಗಿವೆ. ಸರಣ್ಯಾ ಈಗ ಬದ್ಲಾಪುರ್ ಬಾಯ್ಸ್ ಚಿತ್ರದಲ್ಲಿ ಹೀರೋಯಿನ್.
ಕಳೆದ 5 ವರ್ಷಗಳಿಂದ ದೂರ ನಿಂತು ಬಾಲಿವುಡ್ಡನ್ನು ಗಮನಿಸಿದ್ದ ಸರಣ್ಯಾಗೆ ಅಲ್ಲಿನ ವಸ್ತ್ರವೈರಾಗ್ಯ ಕಂಡು ಅವಕಾಶಗಳನ್ನು ನಿರಾಕರಿಸಿದ್ದಳು. ಆದರೆ ಈಗ ಅಲ್ಲಿ ಅಭಿನಯಿಸಿ ಬಂದ ಮೇಲೆ ಬಾಲಿವುಡ್ ಅಷ್ಟೊಂದು ಕೆಟ್ಟದಾಗಿಲ್ಲ ಎಂದು ಅನಿಸಿದೆಯಂತೆ.
ಈ ಬಾಲಿವುಡ್ ಚಿತ್ರದಲ್ಲೂ ಆಕೆ ಟಿಪಿಕಲ್ ದಕ್ಷಿಣ ಭಾರತೀಯ ಸಂಪ್ರದಾಯಿಕ ಶೈಲಿಯಲ್ಲೇ ಬಟ್ಟೆ ಧರಿಸಿದ್ದು, ಈ ರೀತಿಯ ಪಾತ್ರಗಳಾದರೆ ಆಕೆ ಬಾಲಿವುಡ್ಡಲ್ಲೇ ನೆಲೆವೂರಲು ರೆಡಿಯಂತೆ. ಅಂದಹಾಗೆ, ಬದ್ಲಾಪುರ್ ಬಾಯ್ಸ್ ಚಿತ್ರ ತಮಿಳಿನ ವೆನ್ನಿಲಾ ಕಬ್ಬಡಿ ಕುಳು ಚಿತ್ರದ ರೀಮೇಕ್. ನವೆಂಬರ್ 7ಕ್ಕೆ ಚಿತ್ರ ಬಿಡುಗಡೆಯಾಗಲಿದೆ.