ಆರಾಧ್ಯ ದೇವತೆ, ಐಶ್ವರ್ಯಾ ಎಂಬ ನಿಧಿ

ಯಶಸ್ಸಿನ ಮೆಟ್ಟಿಲೇರಿದ್ದರೂ ಸರಳತೆಯನ್ನು ಮೈಗೂಡಿಸಿಕೊಂಡವಳು...
ಐಶ್ವರ್ಯಾರೈ
ಐಶ್ವರ್ಯಾರೈ

1994ರಲ್ಲಿ ಮಿಸ್ ವರ್ಲ್ಡ್ ಕಿರೀಟ ಧರಿಸಿದವಳು. ಕ್ಯಾನ್ಸ್‌ಫಿಲ್ಮ್ ಫೆಸ್ಟಿವಲ್ ಜ್ಯೂರಿಯ ಭಾಗವಾಗಿರುವ ಮೊದಲ ಭಾರತೀಯ ನಟಿ, ಅಂತರಾಷ್ಟ್ರೀಯ ವಾಚ್ ಲಾಂಗಿನ್ಸ್‌ಗೆ ರಾಯಭಾರಿ, ರೋಲಿಂಗ್ ಸ್ಟೋನ್ಸ್ ದೈನಿಕದಲ್ಲಿ ಕಾಣಿಸಿಕೊಂಡ ಮೊದಲ ಬಾಲಿವುಡ್ ನಟಿ.

ಅದೆಷ್ಟು ಸಮೀಕ್ಷೆಗಳು ಇವಳನ್ನು ಸೌಂದರ್ಯದ ಖನಿ, ಆಕರ್ಷಣೀಯ ಮಹಿಳೆ ಎಂಬುದನ್ನು ಸಾಬೀತು ಪಡಿಸಿವೆಯೋ ಲೆಕ್ಕವಿಟ್ಟೋರು ಯಾರು? ಏಡ್ಸ್, ಎಚ್‌ಐವಿ, ಕಣ್ಣಿನ ದಾನದ ಬಗ್ಗೆ ಅರಿವು ಮೂಡಿಸಲೂ ಕಟಿಬದ್ಧಳಾಗುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿಯೂ ಐಶ್ವರ್ಯಾ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ.

ಸೌಂದರ್ಯದ ಖನಿ, ಬಾಲಿವುಡ್‌ನ ಬಿಗ್ ಬಿ ಮನೆ ಸೊಸೆ ಐಶ್ವರ್ಯಾರೈ ಬೇರೆ ನಟಿಯರಿಗಿಂತ ಸದಾ ವಿಭಿನ್ನ. ಯಶಸ್ಸಿನ ಮೆಟ್ಟಿಲೇರಿದ್ದರೂ ಸರಳತೆಯನ್ನು ಮೈಗೂಡಿಸಿಕೊಂಡವಳು. ಆಗಾಧ ಭಾವನೆಗಳು, ನೋವು, ದುಃಖ, ದುಮ್ಮಾನಗಲಿದ್ದರೂ ಸಾರ್ವಜನಿಕವಾಗಿ ತೋರ್ಪಡಿಸಿಕೊಂಡವಳಲ್ಲ.

ಜೀವನದಲ್ಲಿ ಕೆಳಗೆ ಬಿದ್ದೇ ಎದ್ದು ನಿಂತವಳು. ಸಾಮಾನ್ಯ ಹೆಣ್ಣಿನಂತೆಯೇ ಕುಟುಂಬ ಮತ್ತು ಉದ್ಯೋಗವನ್ನು ಒಟ್ಟಾಗಿ ನಿರ್ವಹಿಸುವಾಗ ಎದುರಿಸಬೇಕಾದ ಸವಾಲುಗಳು ಇವಳಿಗೂ ಇವೆ. ಎಲ್ಲವನ್ನೂ ಸುಸೂತ್ರವಾಗಿಯೇ ನಿಭಾಯಿಸುತ್ತಿರೋದು ಆಕೆಯ ಶಕ್ತಿ.

ಮನೋಬಲವನ್ನು ಇತರರಿಗಿಂತ ವಿಭಿನ್ನವಾಗಿ ಬೆಳೆಸಿಕೊಂಡಿರುವುದು ಐಶ್ವರ್ಯಾಳ 'ಐ'ನಲ್ಲಿಯೇ ಗೋಚರಿಸುತ್ತದೆ. ಯಶಸ್ಸಿನಿಂದ ಅವಳು ಉಬ್ಬಿ ಹೋಗಿಲ್ಲ. ಕೆಳಗೆ ಬಿದ್ದಾಗ ನಲುಗಲೂ ಇಲ್ಲ. ಮೇಲೆದ್ದು ನೆಲೆಯೂರಿದಾಗ ಅಹಂಕಾರ ಅವಳನ್ನು ಆಳಲು ಬಿಡಲಿಲ್ಲ. ಎಲ್ಲರಲ್ಲೊಂದಾಗಿ ಪ್ರತಿಯೊಂದನ್ನು ನಿಭಾಯಿಸುತ್ತಿರುವುದರಲ್ಲಿಯೇ ಐಶ್ವರ್ಯಾಳ ಶ್ರೀಮಂತಿಕೆ ಅಡಗಿದೆ.

ಐಶ್ವರ್ಯಾ ಭುವನ ಸುಂದರಿ ಕಿರೀಟ ಧರಿಸಿದಾಗ ಯಶಸ್ಸು ಅವಳನ್ನು ಬೆನ್ನತ್ತಿದ್ದು ಹೌದು. ಅದೇ ಹುಮ್ಮಸ್ಸಿನಲ್ಲಿ ಬಾಲಿವುಡ್‌ಗೆ ಎಂಟರ್ ಆದಾಗ ಅವಳನ್ನೇನು ಗೆಲುವು ಕೈ ಹಿಡಿದಿರಲಿಲ್ಲ. ಸೋಲನ್ನೂ ಯಶಸ್ಸಿನ ಮೆಟ್ಟಿಲಾಗಿಸಿಕೊಂಡಳು.

ಅಭಿನಯದಲ್ಲಿ ಪಳಗಿದರು. 'ಹಮ್ ದಿಲ್ ದೇ ಚುಕೇ ಸನಮ್‌' ಅತ್ಯುತ್ತಮ ನಟನೆಗಾಗಿ ಫಿಲ್ಮಫೇರ್ ಪ್ರಶಸ್ತಿಯೂ ಸಿಕ್ಕಿತು. ಆಮೇಲೆ ಬಂದ ಈಕೆಯ ಚಿತ್ರಗಳು ಬಾಕ್ಸ್ ಆಫೀಸ್‌ನ್ನು ಕೊಳ್ಳೆ ಹೊಡೆದವು. ಹಾಗಂತ ತಲೆ ಮೇಲೆ ಕೋಡು ಬೆಳೆಸಿಕೊಳ್ಳಲಿಲ್ಲ. ತಮಿಳು, ತೆಲುಗು ಹಾಗೂ ಬೆಂಗಾಲಿಯಂಥ ಪ್ರಾದೇಶಿಕ ಚಿತ್ರಗಳಲ್ಲೂ ನಟನೆಗೆ ಸೈ ಎಂದು ಅಭಿನಯಕ್ಕೆ ಜೈ ಎಂದಳು. ಎಲ್ಲರಿಗೂ ಎಟಕುವಂತೆ ಬದುಕನ್ನು ರೂಪಿಸಿಕೊಂಡಿದ್ದು ಅವಳ ಗ್ರೇಟ್‌ನೆಸ್.

ಸಲ್ಮಾನ್ ಖಾನ್ ಐಶ್ ನಡುವೆಯ ಸಂಬಂಧದ ಗುಸು ಗುಸು ಸುದ್ದಿ ಹಬ್ಬಿತ್ತು. ದೈಹಿಕ ಕಿರುಕುಳ ನಡೆದ ಪುಕರಾರುಗಳೂ ಇದ್ದವು. ಯಾರು ಏನೇ ಅಂದ್ರೂ ಈ ಬಗ್ಗೆ ಆಕೆ ತುಟಿ ಪಿಟಕ್ ಎನ್ನಲಿಲ್ಲ. ತನ್ನ ಪ್ರೀತಿ, ಪ್ರೇಮ, ಪ್ರಣಯಗಳ ಬಗ್ಗೆ ಹಬ್ಬಿದ್ದ ಗಾಸಿಪ್‌ಗಳಿಗೆ ಜಾಣ ಕಿವುಡು, ಕುರುಡು ಪ್ರದರ್ಶಿಸಿದಳು. ಆಕ್ಷಣದಲ್ಲಿಯೇ ಮೌನ ವಹಿಸಿ, ಗೆಲುವಿನ ಮೆಟ್ಟಿಲುಗಳನ್ನಾಗಿಸಿಕೊಂಡಳು.

ಭವಿಷ್ಯದಲ್ಲಿ ಅವಳನ್ನು ಮತ್ತಷ್ಟು ಯಶಸ್ಸಿನ ಉತ್ತುಂಗಕ್ಕೇ ಏರಲು ಸಹಕರಿಸಿದ್ದು ಅಗತ್ಯ ವಿಷ್ಯಗಳಲ್ಲಿ ಅವಳು ಗೌಪ್ಯತೆ ಕಾಪಾಡಿಕೊಂಡಿದ್ದರಿಂದಲೇ. ಮನದಲ್ಲಿ ನೋವಿದ್ದರೂ, ಮುಖದಲ್ಲಿ ಮಂದಹಾಸ ಮಾಯವಾಗದಂತೆ ಎಚ್ಚರವಾಗಿದ್ದಳು. ಯಶಸ್ಸಿನ ಮೆಟ್ಟಿಲೇರಿದಾಗಲೂ ಐಶ್ವರ್ಯಾ ಅದನ್ನೇ ನಂಬಿ ಕೂರಲಿಲ್ಲ. ಜೀವನದಲ್ಲಿ ಸೆಟಲ್ ಆಗಬೇಕೆಂದುಕೊಂಡಳು. ಬಿಗ್ ಬಿ ಮನೆ ಸೊಸೆಯಾದಳು. ಸಮಯ ಮೀರುವುದರೊಳಗೆ ತಾಯಿಯೂ ಆದಳು. ಅಮ್ಮನಾದ ಸುಖದಲ್ಲಿಯೇ ಎಲ್ಲವನ್ನೂ ಮರೆತು ಬಿಡಲಿಲ್ಲ.

ಸೊಸೆಯಾಗಿ, ಹೆಂಡತಿಯಾಗಿ, ಅಮ್ಮನಾಗಿ ನಿಭಾಯಿಸಬೇಕಾದ ಎಲ್ಲ ಜವಾಬ್ದಾರಿಗಳನ್ನು ಹೊತ್ತು, ಎಲ್ಲರ 'ಆರಾಧ್ಯ' ದೇವತೆಯಾದಳು. ಮತ್ತೆ ನಟನೆಗೆ ಮುಂದಾದಳು. ಈಗ ಶೂಟಿಂಗ್‌ಗೆ ಹೋಗುವಾಗಲೆಲ್ಲ ಮಗಳು ಆರಾಧ್ಯಳನ್ನೂ ಕರೆದುಕೊಂಡೇ ಹೋಗುತ್ತಾಳಂತೆ. ಆಕೆಯ ಸಂಸಾರದ ಬಗ್ಗೆಯೂ ಆಗಾಗ ಗುಸುಗುಸು ಏಳುತ್ತಲೇ ಇರುತ್ತದೆ.

ಹೆಚ್ಚಾಗಿ ಮೌನಕ್ಕೆ ಶರಣು ಎನ್ನುತ್ತಾಳೆ. ಯಾವಾಗ? ಎಷ್ಟು ಬೇಕೋ ಅಷ್ಟನ್ನೇ ಮಾತನಾಡುತ್ತಾಳೆ. ಜೀವನದಲ್ಲಿ ಪ್ರೀತಿ ಮತ್ತು ಸಂಬಂಧಕ್ಕೆ ಎಲ್ಲಿಲ್ಲದ ಒತ್ತು ನೀಡುತ್ತಿದ್ದಾಳೆ. ಅದಕ್ಕೆ ಐಶ್ವರ್ಯಾ ಬೇರಲ್ಲ ನಟಿಯರಿಗಿಂತ ವಿಭಿನ್ನ.

-ನಿರೂಪಮಾ.ಕೆ.ಎಸ್


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com