ಜನಾಂಗೀಯ ಜಾಹಿರಾತಿನಿಂದ ವಿವಾದಕ್ಕೀಡಾದ ಐಶ್

ಬಚ್ಚನ್ ಕುಟುಂಬದ ಸೊಸೆ ಮತ್ತು ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಹೊಸ ವಿವಾದವೊಂದನ್ನು ಮೈ ಮೇಲೆ ಎಳೆದುಕೊಂಡು, ಮಹಿಳಾ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಆಭರಣ ಸಂಸ್ಥೆಯ ವಿವಾದಾತ್ಮಕ ಜಾಹಿರಾತು
ಆಭರಣ ಸಂಸ್ಥೆಯ ವಿವಾದಾತ್ಮಕ ಜಾಹಿರಾತು

ಮುಂಬೈ: ಬಚ್ಚನ್ ಕುಟುಂಬದ ಸೊಸೆ ಮತ್ತು ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಹೊಸ ವಿವಾದವೊಂದನ್ನು ಮೈ ಮೇಲೆ ಎಳೆದುಕೊಂಡು, ಮಹಿಳಾ ಕಾರ್ಯಕರ್ತರ ಕೆಂಗಣ್ಣಿಗೆ
ಗುರಿಯಾಗಿದ್ದಾರೆ.

ಐಶ್ವರ್ಯಾ ರೈ ಅವರು ಪ್ರಮುಖ ಆಭರಣ ತಯಾರಿಕಾ ಸಂಸ್ಥೆ ಕಲ್ಯಾಣ್ ಜ್ಯುವೆಲ್ಲರ್ಸ್ ಸಂಸ್ಥೆಯ ಪ್ರಚಾರ ರಾಯಭಾರಿಯಾಗಿದ್ದು, ಇತ್ತೀಚೆಗೆ ಮುದ್ರಣ ಮಾಧ್ಯಮದಲ್ಲಿ ಪ್ರಕಟಗೊಂಡಿದ್ದ ಜಾಹಿರಾತುವೊಂದು ಇದೀಗ ಜನಾಂಗೀಯ ವಿವಾದಕ್ಕೀಡಾಗಿದೆ. ಕಲ್ಯಾಣ್ ಜ್ಯುವೆಲ್ಲರ್ಸ್ ನ ಈ ಜಾಹಿರಾತಿನಲ್ಲಿ ಐಶ್ವರ್ಯಾ ರೈ ಸಕಲ ಆಭರಣಗಳನ್ನು ಧರಿಸಿದ್ದರೆ, ಅವರ ಹಿಂದೆ ಬಾಲಕನೊಬ್ಬ ಛತ್ರಿ ಹಿಡಿದು ನಿಂತಿರುತ್ತಾನೆ. ಈ ಜಾಹಿರಾತು ಇದೀಗ ಸಾಮಾಜಿಕ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಜಾಹಿರಾತು ಬಾಲ ಕಾರ್ಮಿಕ ವ್ಯವಸ್ಥೆಯನ್ನು ಬಿಂಬಿಸುವಂತಿದ್ದು, ಇದೇ ಕಾರಣಕ್ಕಾಗಿ ಸಾಮಾಜಿಕ ಕಾರ್ಯಕರ್ತರು ನಟಿ ಐಶ್ವರ್ಯಾ ರೈ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಹಕ್ಕು ಸಮಿತಿಯ ಮಾಜಿ ಅಧ್ಯಕ್ಷರೊಬ್ಬರು ನಟಿ ಐಶ್ವರ್ಯಾ ರೈಗೆ ಪತ್ರ ಬರೆದಿದ್ದು, ಪತ್ರದಲ್ಲಿ ಜನಾಂಗೀಯ ಜಾಹಿರಾತಿಗೆ ಸಂಬಂಧಿಸಿದಂತೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. "ನಿಮ್ಮ ಜಾಹಿರಾತು ಪರಿಕಲ್ಪನೆಯಿಂದ ನಮಗೆ ತೀರಾ ನಿರಾಶೆಯಾಗಿದ್ದು, ಒಂದು ಸಮುದಾಯದ ಪ್ರಮುಖ ವ್ಯಕ್ತಿಯಾಗಿರುವ, ದೇಶದ ಪ್ರತಿಷ್ಟಿತ ಕುಟುಂಬದ ಸೊಸೆಯಾಗಿರುವ, ಸಾಕಷ್ಟು ಮಂದಿ ಅಭಿಮಾನಿಗಳನ್ನು ಹೊಂದಿರುವ ನೀವು ಇಂತಹ ಕೆಳಮಟ್ಟದ ಸಂದೇಶ ನೀಡುವ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿರುವುದು ವಿಷಾಧನೀಯ" ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಹಿರಾತು ಪರಿಲ್ಪನೆ ಸಂಸ್ಥೆಯದ್ದೇ ಹೊರತು ನನ್ನದಲ್ಲ: ಸ್ಪಷ್ಟನೆ ನೀಡಿದ ಐಶ್
ಜಾಹಿರಾತು ವಿಚಾರ ವಿವಾದಕ್ಕೀಡಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ನಟಿ ಐಶ್ವರ್ಯಾ ರೈ, ಜಾಹಿರಾತು ಪರಿಕಲ್ಪನೆ ನನ್ನದಲ್ಲ. ಸಂಸ್ಥೆಯ ಕ್ರಿಯಾತ್ಮಕ ತಂಡದ್ದು. ಪ್ರಸ್ತುತ ಜಾಹಿರಾತು ಸಂಬಂಧಿತ ವಿಚಾರವನ್ನು ಸಂಸ್ಥೆಯ ಕ್ರಿಯಾತ್ಮಕ ತಂಡದ ಸಿಬ್ಬಂದಿಗೆ ತಿಳಿಸಲಾಗುವುದು. ಅವರು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲ್ಲಿದ್ದಾರೆ. ತಿಳಿಯದೇ ಆದ ಪ್ರಮಾದವನ್ನು ತಿಳಿಸಿ ಎಚ್ಚರಿಸಿದ ಎಲ್ಲರಿಗೂ ವಂದನೆ ಹೇಳುತ್ತೇನೆ ಎಂದು ನಟಿ ಐಶ್ವರ್ಯಾ ಹೇಳಿದ್ದಾರೆ.

ಜಾಹಿರಾತು ಹಿಂಪಡೆಯುತ್ತೇವೆ: ಕಲ್ಯಾಣ್ ಜ್ಯುವೆಲ್ಲರ್ಸ್

ತನ್ನ ಜಾಹಿರಾತಿಗೆ ಸಂಬಂಧಿಸಿದಂತೆ ಭುಗಿಲೆದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಕಲ್ಯಾಣ್ ಜ್ಯುವೆಲ್ಲರ್ಸ್ ಸಂಸ್ಥೆ ಕೂಡ ಸ್ಪಷ್ಟನೆ ನೀಡಿದ್ದು, ಕೂಡಲೇ ತನ್ನ ಜಾಹಿರಾತನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದೆ. ಸಂಸ್ಥೆಯ ಫೇಸ್ ಬುಕ್ ಪೇಜ್ ನಲ್ಲಿ ಈ ಬಗ್ಗೆ ಹೇಳಿಕೆ ನೀಡಲಾಗಿದ್ದು, ಸಮಾಜದ ಯಾವುದೇ ಸಮುದಾಯವನ್ನು ಅವಮಾನಗೊಳಿಸಲು ನಾವು ಈ ಜಾಹಿರಾತನ್ನು ಪ್ರಚಾರ ಮಾಡಿಲ್ಲ. ಒಂದು ವೇಳೆ ನಮ್ಮ ಈ ಜಾಹಿರಾತಿನಿಂದ ಯಾರಿಗಾದರೂ ಬೇಸರ ಉಂಟಾಗಿದ್ದರೆ ನಾವು ಅದಕ್ಕೆ ವಿಷಾಧಿಸುತ್ತೇವೆ. ಈಗಾಗಲೇ ಜಾಹಿರಾತುಗಳನ್ನು ಹಿಂಪಡೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಲ್ಯಾಣ್ ಜ್ಯುವೆಲ್ಲರ್ಸ್ ಸಂಸ್ಥೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com