
ನವದೆಹಲಿ: ಬಾಲಿವುಡ್ ನಟಿ ಕರೀನಾ ಕಪೂರ್ ಅಸಮಾಧಾನಗೊಂಡಿದ್ದಾರಂತೆ. ಅವರ ಅಸಮಾಧಾನಕ್ಕೆ ಅವರದೇ ಮೇಣದ ಪ್ರತಿಮೆ ಕಾರಣವಂತೆ.
ಹೌದು ನಟಿ ಕರೀನಾ ಕಪೂರ್ ತಮ್ಮದೇ ಮೇಣದ ಪ್ರತಿಮೆಯಿಂದಾಗಿ ಕೊಂಚ ಅಸಮಾಧಾನಗೊಂಡಿದ್ದಾರಂತೆ. ಲಂಡನ್ ನಲ್ಲಿರುವ ಮೇಡಮ್ ಟ್ಯೂಸಾಡ್ಸ್ ಮ್ಯೂಸಿಯಂನಂತೆಯೇ ಸಿಂಗಾಪುರದಲ್ಲಿಯೂ ಅಂತಹುದೇ ವಸ್ತು ಸಂಗ್ರಹಾಲಯವಿದೆ. ಇಲ್ಲಿ ಕರೀನಾ ಕಪೂರ್ ಅವರ ಮೇಣದ ಪ್ರತಿಮೆಯನ್ನು ರೂಪಿಸಲಾಗಿದೆ. ಅದರೆ ಕರೀನಾ ಕಪೂರ್ ಅವರು ಹೇಳುವಂತೆ ಲಂಡನ್ ನಲ್ಲಿರುವ ತಮ್ಮ ಮೇಣದ ಪ್ರತಿಮೆಯಂತೆ ಇದು ಇಲ್ಲ. ಪ್ರತಿಮೆಯಲ್ಲಿ ಕೆಲ ಲೋಪದೋಷಗಳಿವೆಯಂತೆ.
ಲಂಡನ್ ನಲ್ಲಿರುವ ಮೇಣದ ಪ್ರತಿಮೆಗೂ ಸಿಂಗಾಪುರದಲ್ಲಿರುವ ಮೇಣದ ಪ್ರತಿಮೆಗೂ ಕೆಲ ವ್ಯತ್ಯಾಸಗಳಿದ್ದು, ಸಿಂಗಾಪುರದ ಮೇಣದ ಪ್ರತಿಮೆಯಲ್ಲಿ ಕರೀನಾ ವಯಸ್ಸಾದವರಂತೆ ಕಾಣುತ್ತಾರಂತೆ. ತಲೆಕೂಡ ಕೊಂಚ ದಪ್ಪಗಿದ್ದು, ಭುಜಗಳು ದೊಡ್ಡದಾಗಿವೆ ಎಂಬುದು ಕರೀನಾ ದೂರು. ಹೀಗಾಗಿ ಕರೀನಾ ತಮ್ಮದೇ ಮೇಣದ ಪ್ರತಿಮೆ ಕುರಿತಂತೆ ಕೊಂಚ ಅಸಮಾಧಾನಗೊಂಡಿದ್ದಾರೆ.
ಸಿಂಗಾಪುರದಲ್ಲಿರುವ ಮ್ಯೂಸಿಯಂನಲ್ಲಿ ಕರೀನಾ ಕಪೂರ್ ಅವರ ಮೇಣದ ಪ್ರತಿಮೆಯನ್ನು ಇತ್ತೀಚೆಗಷ್ಟೇ ಅನಾವರಣಗೊಳಿಸಲಾಗಿತ್ತು. ಸ್ವತಃ ಕರೀನಾ ಕಪೂರ್ ಅವರು ಇದನ್ನು ಅನಾವರಣಗೊಳಿಸಿದ್ದರು. ಇದು ಕರೀನಾ ಅವರ ಎರಡನೇ ಮೇಣದ ಪ್ರತಿಮೆಯಾಗಿದ್ದು, ಇದಕ್ಕೂ ಮೊದಲು ಲಂಡನ್ ನಲ್ಲಿರುವ ಮೇಡಮ್ ಟ್ಯೂಸಾಡ್ಸ್ ಮ್ಯೂಸಿಯಂನಲ್ಲಿ ಅವರ ಮೊದಲ ಮೇಣದ ಪ್ರತಿಮೆ ಅನಾವರಣಗೊಂಡಿತ್ತು.
Advertisement