

ಚಂಡೀಗಢ: ಎಂಎಸ್‌ಜಿ - ದ ಮೆಸೆಂಜರ್ ಸಿನಿಮಾ ಇವತ್ತು ದೇಶಾದ್ಯಂತ ತೆರೆ ಕಂಡಿದೆ. ಪ್ರಸ್ತುತ ಸಿನಿಮಾಗೆ ಸಂಬಂಧಿಸಿದಂತೆ ವಿವಾದಗಳು ಹುಟ್ಟಿಕೊಂಡಿರುವುದರಿಂದ ಹರ್ಯಾಣ ಮತ್ತು ಚಂಡೀಗಢದಲ್ಲಿ ನಿನ್ನೆಯಿಂದಲೇ ಬಿಗಿ ಭದ್ರತೆಯನ್ನೇರ್ಪಡಿಸಿದೆ.
ದೇರಾ ಸಾಚಾ ಸೌದಾ ಮುಖ್ಯಸ್ಥ ಗುರ್‌ಮೀತ್ ರಾಮ್ ರಹೀಂ ಸಿಂಗ್ ಅವರ ಈ ಸಿನಿಮಾ ಬಿಡುಗಡೆಗೆ ಸಿಖ್ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದರು. ಸಿಖ್ ಸಮುದಾಯದಿಂದ ಪ್ರತಿಭಟನೆ ಕಂಡು ಬಂದ ಕಾರಣ ಹರ್ಯಾಣ ಮತ್ತು ಚಂಡೀಗಢದಲ್ಲಿ ಬಿಗಿ ಭದ್ರತೆಯನ್ನೊದಗಿಸಲಾಗಿದೆ.
ಈ ಎರಡೂ ರಾಜ್ಯಗಳಲ್ಲಿ ಪೊಲೀಸ್ ಮತ್ತು ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಪಂಜಾಬ್‌ನಲ್ಲಿ ಕಳೆದ ತಿಂಗಳು ಈ ಸಿನಿಮಾ ಬಿಡುಗಡೆಗೆ ನಿಷೇಧ ಹೇರಲಾಗಿತ್ತು.
ಕಳೆದ ವಾರವಷ್ಟೇ ಸೆನ್ಸಾರ್ ಮಂಡಳಿ ಸಿನಿಮಾ ತೆರೆ ಕಾಣುವುದಕ್ಕೆ ಸಮ್ಮತಿ ನೀಡಿತ್ತು. ಶುಕ್ರವಾರ ದೇಶಾದ್ಯಂತ 4,000 ಸ್ಕ್ರೀನ್‌ಗಳಲ್ಲಿ ಪ್ರಸ್ತುತ ಚಿತ್ರ ಪ್ರದರ್ಶನ ಕಾಣುತ್ತಿದೆ.