ಲಾಸೇಂಜಲಿಸ್: ಅಮೆರಿಕಾ ಟಿವಿ ಧಾರಾವಾಹಿ 'ಕ್ವಾಂಟಿಕೋ' ಮೂಲಕ ಜಾಗತಿಕ ಮನ್ನಣೆ ಪಡೆದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಾವೆಂದಿಗೂ 'ಡೇಟಿಂಗ್' ನಡೆಸಿಲ್ಲ ಎಂದಿದ್ದಾರೆ.
ಹಾಲಿವುಡ್ ಸಿನೆಮಾ 'ಬೇವಾಚ್' ನಲ್ಲೂ ಪಾದಾರ್ಪಣೆ ಮಾಡುತ್ತಿರುವ ಮಾಜಿ ವಿಶ್ವ ಸುಂದರಿ ಇನ್ ಸ್ಟೈಲ್ ಪತ್ರಿಕೆಗೆ ತಮ್ಮ ಜೀವನದ ಪ್ರೀತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
"ನಾನೆಂದಿಗೂ ಡೇಟಿಂಗ್ ಮಾಡಿಲ್ಲ" ಎಂದು ಪತ್ರಿಕೆಯ ಆಗಸ್ಟ್ 2016 ನೇ ಆವೃತ್ತಿಯ ಮುಖಪುಟದಲ್ಲಿ ಕಾಣಿಸಿಕೊಂಡಿರುವ ನಟಿ ಹೇಳಿದ್ದು "ಆದರೆ ಸಂಬಂಧಗಳಲ್ಲಿ ತೊಡಗಿಸಿಕೊಂಡಿದ್ದೇನೆ" ಎಂದಿದ್ದಾರೆ.
ಭಾರತದಲ್ಲಿ ಸಂಬಂಧ ಬಂಧಿಸುವ ರೀತಿಯೇ 'ತುಸು ವಿಭಿನ್ನ' ಎಂದು ನಟಿ ಹೇಳಿದ್ದು "ನಿಮಗೆ ಯಾರಾದರೂ ಇಷ್ಟವಾದರೆ, ಅವರನ್ನು ಚೆನ್ನಾಗಿ ಅರಿತು ನಂತರ ಅವರ ಜೊತೆಗೆ ಸಂಬಂಧ ಬೆಳೆಸುತ್ತೀರಿ" ಎಂದಿದ್ದಾರೆ.
"ಈ ಸಂಬಂಧದಲ್ಲಿ ಪರಸ್ಪರ ನಂಬಿಕೆ ಮತ್ತು ಉತ್ತರ ನೀಡಬೇಕಾಗುತ್ತದೆ. ಆದರೆ ಡೇಟಿಂಗ್ ನಲ್ಲಿ ಯಾರಿಗೂ ಉತ್ತರಿಸುವ ಅವಶ್ಯಕತೆ ಇಲ್ಲ. ದೇವರೇ, ನಾನೆಂದಿಗೂ ಡೇಟ್ ಮಾಡಲು ಸಾಧ್ಯವೇ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟ" ಎಂದು ಪ್ರಿಯಾಂಕಾ ಹೇಳಿದ್ದಾರೆ.
33 ವರ್ಷದ ನಟಿ ಈ ಹಿಂದೆ ಬಾಲಿವುಡ್ ನಟ ಶಾಹಿದ್ ಕಪೂರ್, ಹರ್ಮನ್ ಬಾವೇಜಾ ಮತ್ತು ಸೂಪರ್ ಸ್ಟಾರ್ ಶಾರುಖ್ ಖಾನ್ ಅವರೊಂದಿಗೆ ಸಂಬಧದಲ್ಲಿದ್ದಾರೆ ಎಂಬ ವದಂತಿಗಳು ಚಾಲ್ತಿಯಿದ್ದವು.
ನಟಿ ಈ ಹಿಂದೆ ಪ್ರಕಾಶ್ ಜಾ ಅವರ 'ಜೈ ಗಂಗಾಜಲ್' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು.