
ಮುಂಬೈ: ಸೆಲೆಬ್ರಿಟಿಗಳು ಹಲವು ಸಂದರ್ಭಗಳಲ್ಲಿ ತಮ್ಮ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುವ ಗಾಸಿಪ್ ಸುದ್ದಿಗಳನ್ನು ಸಂಭಾಳಿಸಿ ತಮ್ಮ ವೈಯಕ್ತಿಕ ವೈವಾಹಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಾಗುತ್ತದೆ.
ಇತ್ತೀಚೆಗೆ ಐಶ್ವರ್ಯ ರೈ ಅಭಿನಯದ ಸರಬ್ಜಿತ್ ಚಿತ್ರದ ಪ್ರೊಮೋಷನ್ ಕಾರ್ಯಕ್ರಮದಲ್ಲಿ ಅಭಿಷೇಕ್ ಬಚ್ಚನ್ ಐಶ್ವರ್ಯ ಜತೆ ಫೋಟೋಗೆ ಫೋಸ್ ಕೊಡಲಿಲ್ಲ, ಐಶ್ವರ್ಯಳನ್ನು ನಿರ್ಲಕ್ಷ್ಯಿಸಿ ಆಚೆ ನಡೆದು ಹೋದರು, ಇಬ್ಬರ ಮಧ್ಯೆ ಏನೋ ಹೊಂದಾಣಿಕೆಯಿಲ್ಲ ಎಂದೆಲ್ಲ ಸುದ್ದಿಯಾಗಿತ್ತು. ಅಲ್ಲದೆ ಆ ವಿಡಿಯೋ ಕೂಡ ವಾರದವರೆಗೆ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇಷ್ಟು ದಿನ ಸುಮ್ಮನಿದ್ದ ಅಭಿಷೇಕ್ ಬಚ್ಚನ್ ಇಂತಹ ಆಧಾರರಹಿತ ವರದಿಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
''ನನಗೆ ಸತ್ಯ ಏನೆಂದು ಗೊತ್ತಿದೆ. ಮಾಧ್ಯಮದಲ್ಲಿ ಬರುವ ವರದಿಗಳನ್ನು ಎಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸಬೇಕೆಂದು ನನಗೆ ಗೊತ್ತಿದೆ. ನಾವಿಬ್ಬರು ಹೇಗೆ ಜೀವನ ನಡೆಸಬೇಕೆಂದು ಮೂರನೇ ವ್ಯಕ್ತಿ ನಿರ್ಧರಿಸಲು ನಾವು ಬಿಡುವುದಿಲ್ಲ. ನಾನು ಎಷ್ಟು ಐಶ್ವರ್ಯಳನ್ನು ಪ್ರೀತಿಸುತ್ತೇನೆಂದು ಆಕೆಗೆ ಗೊತ್ತು, ಆಕೆ ನನ್ನನ್ನು ಎಷ್ಟು ಪ್ರೀತಿಸುತ್ತಿದ್ದಾಳೆಂದು ನನಗೆ ಗೊತ್ತಿದೆ. ನಿಮ್ಮ ಅನುಕೂಲಕ್ಕಾಗಿ ಏನೋ ತಪ್ಪಾಗಿ ಅರ್ಥೈಸಿದರೆ ಮುಂದುವರಿಸಿ. ನಾನು ಅಷ್ಟಕ್ಕೂ ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ವ್ಯಕ್ತಿ. ಎಲ್ಲಾ ಸಮಯದಲ್ಲಿಯೂ ಮಾಧ್ಯಮವನ್ನು ಖುಷಿಪಡಿಸಲು ನನಗೆ ಸಾಧ್ಯವಿಲ್ಲ. ಹಾಗಾಗಿ ನನಗೆ ಇದೊಂದು ವಿಷಯವೇ ಅಲ್ಲ.'' ಎಂದು ಜೂನಿಯರ್ ಹೇಳಿದ್ದಾರೆ.
Advertisement