ಅಜಾನ್‌ ವಿವಾದ: ತಲೆ ಬೋಳಿಸಿಕೊಂಡ ಸೋನು ನಿಗಮ್

ಮುಸ್ಲಿಮರ ಬೆಳಗಿನ ಪ್ರಾರ್ಥನೆ(ಅಜಾನ್) ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದ ಬಾಲಿವುಡ್ ಗಾಯಕ ಸೋನು ನಿಗಮ್‌ ಅವರು, ಟ್ವೀಟ್ ನಿಂದ ನೋವಾಗಿದ್ದರೆ....
ಮುಂಬೈ: ಮುಸ್ಲಿಮರ ಬೆಳಗಿನ ಪ್ರಾರ್ಥನೆ(ಅಜಾನ್)  ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದ ಬಾಲಿವುಡ್ ಗಾಯಕ ಸೋನು ನಿಗಮ್‌ ಅವರು ಬುಧವಾರ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ.
ಇಂದು ಬೆಳಗ್ಗೆಯಷ್ಚೆ ಪಶ್ಚಿಮ ಬಂಗಾಳದ ಮೌಲ್ವಿ ಸಯ್ಯದ್ ಶಾ ಅತೀಫ್ ಅಲಿ ಅಲ್ ಖಾದ್ರಿ ಸೋನು ನಿಗಮ್‌ ಅವರ ತಲೆ ಬೋಳಿಸಿ, ಅವರ ಕೊರಳಿಗೆ ಹಳೆಯ ಬೂಟುಗಳ ಹಾರ ಹಾಕಿ ಅವರನ್ನು ದೇಶದಾದ್ಯಂತ ಮೆರವಣಿಗೆ ಮಾಡಿದವರಿಗೆ 10 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಈ ಸವಾಲನ್ನು ಸ್ವೀಕರಿಸಿದ್ದ ಸೋನ್ ನಿಗಮ್ ಇಂದು ಮಧ್ಯಾಹ್ನ 2 ಗಂಟೆಗೆ ನಾನಿರುವಲ್ಲಿಗೆ ಆಲಿಮ್‌ ಬಂದು ನನ್ನ ತಲೆ ಬೋಳಿಸುತ್ತಾನೆ. ಮೌಲ್ವಿಯವರೆ ನೀವು 10 ಲಕ್ಷ ಸಿದ್ಧ ಮಾಡಿಕೊಂಡಿರಿ. ಈ ಸಂದರ್ಭದ ವರದಿ ಮಾಡಲು ನಾನು ಪತ್ರಕರ್ತರನ್ನು ಸ್ವಾಗತಿಸುವೆ ಎಂದು ಟ್ವೀಟ್ ಮಾಡಿದ್ದರು.
ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಸೋನು ನಿಗಮ್, ನಾನು ಜಾತ್ಯಾತೀತ ವ್ಯಕ್ತಿ. ನಾನು ಅಜಾನ್ ಬಗ್ಗೆ ವಿರೋಧ ವ್ಯಕ್ತಪಡಿಸಿಲ್ಲ ಮತ್ತು ನಾನು ಮುಸ್ಲಿಂ ವಿರೋಧಿ ಅಲ್ಲ. ಆದರೆ ಅತಿಯಾದ ಶಬ್ದದ ಬಗ್ಗೆ ನನ್ನ ವಿರೋಧವಿದೆ. ಲೌಡ್ ಸ್ಪೀಕರ್ ಮೂಲಕ ದೊಡ್ಡ ಧ್ವನಿ ಹೊರಹಾಕುವುದು ನನ್ನ ಪ್ರಕಾರ ಗೂಂಡಾಗಿರಿಯಾಗಿದೆ ಎಂದಿದ್ದಾರೆ.
ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕು ಇದೆ. ನಾನು ಲೆಫ್ಟ್ ಅಲ್ಲ ರೈಟ್ ವಿಂಗ್ ಅಲ್ಲ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಲೌಡ್ ಸ್ಪೀಕರ್ ಮೂಲಕ ಬೇರೆಯವರಿಗೆ ತೊಂದರೆ ಕೊಡುವಂತೆ ಯಾವ ಧರ್ಮನೂ ಹೇಳಿಲ್ಲ. ರಸ್ತೆಯಲ್ಲಿ ಭಾರಿ ಸಂಗೀತದೊಂದಿಗೆ ನೃತ್ಯ ಮಾಡುವುದನ್ನು ನಾನು ವಿರೋಧಿಸುತ್ತೇನೆ ಎಂದು ಗಾಯಕ ತಿಳಿಸಿದ್ದಾರೆ.
ಇದಕ್ಕೂ ಮುನ್ನ ತನ್ನ ಟ್ವೀಟ್ ಮುಸ್ಲಿಂ ವಿರೋಧಿಯಾಗಿದ್ದರೆ ತಾನು ಕ್ಷಮೆ ಕೇಳಲು ಸಿದ್ಧ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದ್ದರು. ಆದರೆ ಮೌಲ್ವಿಯೊಬ್ಬರು ತಮ್ಮ ತಲೆ ಬೋಳಿಸಲು ಬಹುಮಾನ ಘೋಷಿಸಿದ್ದರಿಂದ ಆಕ್ರೋಶಗೊಂಡ ಸೋನು ನಿಗಮ್ ಸ್ವತಃ ತಲೆ ಬೋಳಿಸಿಕೊಂಡಿದ್ದಾರೆ.
ನಾನು ಮುಸ್ಲಿಂ ಅಲ್ಲದಿದ್ದರೂ ಬೆಳಗ್ಗಿನ ಪ್ರಾರ್ಥನಾ ಸಮಯಕ್ಕೆ (ಅಜಾನ್‌) ಏಳಬೇಕಿದೆ.  ಇಂತಹ ಒತ್ತಾಯಪೂರ್ವಕ ಧಾರ್ಮಿಕ ಆಚರಣೆ ಭಾರತದಲ್ಲಿ ಯಾವಾಗ ಕೊನೆಯಾಗಲಿದೆ ಎಂದು ಸೋನು ನಿಗಮ್‌ ಏಪ್ರಿಲ್‌ 17ರ ಬೆಳಗ್ಗೆ 5.25ಕ್ಕೆ ಟ್ವೀಟ್‌ ಮಾಡಿದ್ದರು. ಏಪ್ರಿಲ್‌ 17ರ ಬೆಳಗ್ಗೆ ಸೋನು ಮಾಡಿದ್ದ ಸರಣಿ ಟ್ವೀಟ್‌ಗಳು ವಿವಾದ ಸೃಷ್ಟಿಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com