ಕೇಂದ್ರ ಸೆನ್ಸಾರ್ ಮಂಡಳಿ ಪುನರಚನೆ: ತಂಡಕ್ಕೆ ನಾಗಾಭರಣ, ವಿದ್ಯಾ ಬಾಲನ್ ಆಯ್ಕೆ

ಕೇಂದ್ರೀಯ ಸೆನ್ಸಾರ್ ಮಂಡಳಿಯಲ್ಲಿ ಕನ್ನಡದ ಖ್ಯಾತ ನಿರ್ದೇಶಕ ಟಿಎಸ್ ನಾಗಾಭರಣ ಹಾಗೂ ಬಾಲಿವುಡ್ ನ ಖ್ಯಾತ ನಟಿ ವಿದ್ಯಾಬಾಲನ್ ಅವರಿಗೆ ಸ್ಥಾನ ನೀಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೇಂದ್ರೀಯ ಸೆನ್ಸಾರ್ ಮಂಡಳಿಯನ್ನು ಪುನಾರಚನೆ ಮಾಡಿರುವ ಕೇಂದ್ರ ಸರ್ಕಾರ, ನೂತನ ಅಧ್ಯಕ್ಷರಾಗಿ ಪ್ರಸೂನ್ ಜೋಷಿ ಅವರನ್ನು ನೇಮಕ ಮಾಡಿದೆ. ವಿಶೇಷವೆಂದರೆ ಕೇಂದ್ರ ಸರ್ಕಾರದ ನೂತನ ತಂಡದಲ್ಲಿ  ಕನ್ನಡದ ಖ್ಯಾತ ನಿರ್ದೇಶಕ ಟಿಎಸ್ ನಾಗಾಭರಣ ಹಾಗೂ ಬಾಲಿವುಡ್ ನ ಖ್ಯಾತ ನಟಿ ವಿದ್ಯಾಬಾಲನ್ ಅವರಿಗೆ ಸ್ಥಾನ ನೀಡಲಾಗಿದೆ.

ಬಾಲಿವುಡ್‌ನ ಖ್ಯಾತ ಗೀತ ರಚನೆಕಾರ ಪ್ರಸೂನ್‌ ಜೋಷಿ ಅವರನ್ನು ಸೆನ್ಸಾರ್ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಉಳಿದಂತೆ ಪ್ರಸೂನ್‌ ಜೋಷಿ ಅವರೊಂದಿಗೆ ದಕ್ಷಿಣ ಭಾರತದ ನಟಿ ಗೌತಮಿ ತಡಿಮಲ್ಲ, ಖ್ಯಾತ  ಹಿಂದಿ ಲೇಖಕ ನರೇಂದ್ರ ಕೊಹ್ಲಿ, ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ನರೇಶ್ ಚಂದರ್ ಲಾಲ್, ಖ್ಯಾತ ಸಂಗೀತ ನಿರ್ದೇಶಕ ನೀಲ್ ಹರ್ಬರ್ಟ್ ನೊಂಗ್ಕಿನ್ರಿಹ್, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಖ್ಯಾತ ನಾಟಕ ರಚನೆಕಾರ  ವಾಮನ್ ಕೇಂದ್ರೀ, ಕನ್ನಡದ ಖ್ಯಾತ ನಿರ್ದೇಶಕ ಟಿ.ಎಸ್. ನಾಗಭರಣ, ಸಾಮಾಜಿಕ್ ಸಮರಶ್ಟಾ ಮಂಚ್ ಸಂಘಟನೆ ಮುಖ್ಯಸ್ಥ ರಮೇಶ್ ಪಟೇಂಜ್, ಹಿರಿಯ ನಟಿ ಮತ್ತು ಬಿಜೆಪಿ ಮುಖಂಡರಾದ ವಾಣಿ ತ್ರಿಪಾಟಿ ಟಿಕು, ಖ್ಯಾತ ತೆಲುಗು  ನಟಿ ಜೀವಿತ ರಾಜಶೇಖರ್ ಮತ್ತು ಲೇಖಕರಾದ ಮಿಹಿರ್ ಭೂತಾ ಅವರನ್ನು ಸೆನ್ಸಾರ್ ಮಂಡಳಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.

ಇನ್ನು ಸೆನ್ಸಾರ್ ಮಂಡಳಿಗೆ ತಮ್ಮನ್ನು ಆಯ್ಕೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟಿ ವಿದ್ಯಾಬಾಲನ್, ಹೊಸ ಜವಾಬ್ದಾರಿ ತುಂಬಾ ಖುಷಿ ನೀಡಿದೆ. ನನ್ನ ಮೇಲಿನ ಜವಾಬ್ದಾರಿಯನ್ನು ಪೂರ್ಣ ಶ್ರದ್ಧೆಯಿಂದ  ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ. ಅಂತೆಯೇ ಸೆನ್ಸಾರ್ ಮಂಡಳಿ ಅಧ್ಯಕ್ಷರಾಗಿ ನೇಮಕವಾದ ಪ್ರಸೂನ್ ಜೋಷಿ ಅವರು ಮಾತನಾಡಿ ಸಿಬಿಎಫ್ ಸಿಯಲ್ಲಿ ನನ್ನ ಜಬಾವ್ದಾರಿ ಕುರಿತು ಅರಿಯಬೇಕಿದೆ. ಅಂತೆಯೇ ನನಗೆ ನೀಡಿರುವ   ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

2015ರಲ್ಲಿ ಮೂರು ವರ್ಷದ ಅವಧಿಗೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಅಧ್ಯಕ್ಷರಾದ ಪಹ್ಲಾಜ್ ನಿಹಲಾನಿ ಅಧಿಕಾರ ಅವಧಿ 2018ಕ್ಕೆ ಕೊನೆಗೊಳ್ಳಬೇಕಿತ್ತು. ಆದರೆ ಚಲನಚಿತ್ರಗಳಲ್ಲಿಯ ವಿವಾದಿತ  ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ನಿಹಲಾನಿ ಅವರು ಆರಂಭದಿಂದಲೂ ಹಲವು ವಿವಾದಗಳಿಗೆ ಗುರಿಯಾಗಿದ್ದರು. ಸ್ವತಃ ಸೆನ್ಸಾರ್ ಮಂಡಳಿ ಸದಸ್ಯರೇ ನಿಹಲಾನಿ ವಿರುದ್ಧ ತಿರುಗಿ ಬಿದ್ದಿದ್ದರು. ಇಂದು ಸರ್ಕಾರ್‌, ಲಿಪ್‌ ಸ್ಟಿಕ್‌  ಅಂಡರ್ ಮೈ ಬುರ್ಕಾ, ಉಡ್ತಾ ಪಂಜಾಬ್, ವೆನ್‌ ಹ್ಯಾರಿ ಮೆಟ್‌ ಸೆಜಲ್‌ ಹಿಂದಿ ಚಿತ್ರಗಳ ಬಿಡುಗಡೆ ಸಂದರ್ಭದಲ್ಲಿ ಎದ್ದ ವಿವಾದದಲ್ಲಿ ನಿಹಲಾನಿ ಅವರ ಹೆಸರು ಕೇಳಿ ಬಂದಿತ್ತು. ಈ ಚಿತ್ರಗಳ ವಿವಾದಿತ ಮತ್ತು ಅಶ್ಲೀಲ ದೃಶ್ಯಗಳಿಗೆ  ನಿರ್ದಯವಾಗಿ ಕತ್ತರಿ ಹಾಕುವ ಮೂಲಕ ನಿಹಲಾನಿ ಅವರು ನಿರ್ದೇಶಕ ಮತ್ತು ನಿರ್ಮಾಪಕರ ಕೆಂಗಣ್ಣಿಗೆ ಗುರಿಯಾಗಿದ್ದರು.  

ಈ ಎಲ್ಲ ಬೆಳವಣಿಗೆಗಳಿಂದಾಗಿ ಕಳೆದ ತಿಂಗಳು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪಹ್ಲಾಜ್ ನಿಹಲಾನಿ ಅವರನ್ನು ಅಧ್ಯಕ್ಷ ಹುದ್ದೆಯಿಂದ ವಜಾ ಮಾಡುವ ಮುನ್ಸೂಚನೆ ನೀಡಿತ್ತು.

ಇನ್ನು ನಟ ಅಮೀರ್ ಖಾನ್ ನಟನೆಯ ‘ತಾರೆ ಜಮೀನ್ ಪರ್‌’ ಚಿತ್ರದ ಗೀತೆಗಳಿಂದ ಪ್ರಸೂನ್ ಜೋಷಿ ಅವರು ಖ್ಯಾತಿ ಗಳಿಸಿದ್ದರು. ಪ್ರಸ್ತುತ ಪ್ರಸೂನ್ ಜೋಷಿ ಅವರು ಮುಂದಿನ 3 ವರ್ಷ ಸೆನ್ಸಾರ್ ಮಂಡಳಿ ಅಧ್ಯಕ್ಷ ಹುದ್ದೆಯಲ್ಲಿ  ಮುಂದುವರೆಯಲಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಆದೇಶದಲ್ಲಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com