ನವದೆಹಲಿ: ಭಾರತೀಯ ಚಿತ್ರರಂಗದಲ್ಲಿ 'ಟ್ರ್ಯಾಜಿಡಿ ಕ್ವೀನ್' ಎಂದೇ ಪ್ರಖ್ಯಾತವಾಗಿದ್ದ ನಟಿ ಮೀನಾ ಕುಮಾರಿ 85ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಗೂಗಲ್ ಡೂಡಲ್ ನಮನ ಸಲ್ಲಿಸಿದೆ.
ಆಗಸ್ಟ್ 1, 1933ರಲ್ಲಿ ಪರ್ಷಿಯಾದ ಆಲಿ ಭಕ್ಷ್ ಮತ್ತು ರಂಗಭೂಮಿ ಕಲಾವಿದೆ ಇಕ್ಬಾಲ್ ಬೇಗಂ ದಂಪತಿ ಮಗಳಾಗಿ ಜನಿಸಿದ ಮೀನಾ ಕುಮಾರಿ ಮೂಲ ಹೆಸರು ಮಹಜಾಬೀನ್ ಬಾನು. ಚಿತ್ರರಂಗಕ್ಕೆ ಅಡಿಯಿಟ್ಟ ಬಳಿಕ ಮೀನಾ ಕುಮಾರಿಯಾದರು.
ಬಾಲ್ಯದಲ್ಲೇ ಸಾಕಷ್ಟು ಬಡತನ ಅನುಭವಿಸಿದ ಮೀನಾ ಕುಮಾರಿ ಬಾಲ ಕಲಾವಿದೆಯಾಗಿ 6 ವರ್ಷಕ್ಕೆ ಬೆಳ್ಳಿಪರದೆಗೆ ಅಡಿಯಿಟ್ಟರು. ಅವರ ಮೊದಲ ಚಿತ್ರ ವಿಜಯ್ ಭಟ್ ನಿರ್ದೇಶನ ಮತ್ತು ನಿರ್ಮಾಣದ 'ದಿ ಲೆದರ್ ಫೇಸ್'.
ಸಾಹಿಬ್ ಬೀಬಿ ಔರ್ ಗುಲಾಂ (1962), ಪಾಕೀಝಾ, ಬೈಜೂ ಬಾರ್ವಾ, ಯಹುದಿ, ಬಹು ಬೇಗಂ ಚಿತ್ರಗಳಲ್ಲಿನ ಮೀನಾ ಕುಮಾರಿ ಮನೋಜ್ಞ ಅಭಿನಯ ಹಲವು ಪೀಳಿಗೆಗಳಿಗೆ ಸ್ಫೂರ್ತಿದಾಯಕವಾಗಿತ್ತು. ಒಟ್ಟು 30 ವರ್ಷಗಳ ವೃತ್ತಿಬದುಕಿನಲ್ಲಿ 90ಕ್ಕೂ ಹೆಚ್ಚು ಚಿತ್ರಗಳಲ್ಲಿ ಮೀನಾ ಕುಮಾರಿ ನಟಿಸಿದ್ದಾರೆ.