ಮುಂಬೈ: ಜಗತ್ತಿನ ಖ್ಯಾತ ವಿಖ್ಯಾತರ ಮೇಣದ ಪ್ರತಿಮೆಗಳಿಗೆ ಹೆಸರಾಗಿರುವ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನ ದೆಹಲಿ ಮತ್ತು ಲಂಡನ್ ಶಾಖೆಯಲ್ಲಿ ಖ್ಯಾತ ಬಾಲಿವುಡ್ ತಾರೆ, ಕನ್ನಡತಿ ದೀಪಿಕಾ ಪಡುಕೋಣೆ ಅವರ ಮೇಣದ ಪ್ರತಿಮೆ ಶೀಘ್ರದಲ್ಲೇ ಅನಾವರಣಗೊಳ್ಳಲಿದೆ.
ಇಂದು ಲಂಡನ್ ನಲ್ಲಿ ಮೇಡಮ್ ಟುಸಾಡ್ಸ್ ಕಲಾವಿದರ ತಂಡ ದೀಪಿಕಾ ಪಡುಕೋಣೆ ಅವರನ್ನು ಭೇಟಿ ಅವರ ದೇಹದ ಎಲ್ಲಾ ಅಂಗಗಳ ಅಳತೆ ತೆಗೆದುಕೊಂಡಿದೆ.
ಇನ್ನು ಈ ಕುರಿತು ಟ್ವೀಟ್ ಮಾಡಿರುವ ದೀಪಿಕಾ, ಪ್ರತಿಮೆ ಅನಾವರಣವಾಗುತ್ತಿರುವ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಮೊದಲ ಪ್ರತಿಮೆ ಮುಂದಿನ ವರ್ಷಾರಂಭದಲ್ಲಿ ಲಂಡನ್ ನಲ್ಲಿ, ನಂತರ ದೆಹಲಿಯ ಮ್ಯೂಸಿಯಂನಲ್ಲಿಯೂ ಸ್ಥಾಪನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
“ನನ್ನ ಪ್ರತಿಮೆಯನ್ನು ಮೇಡಮ್ ಟುಸಾಡ್ಸ್ನಲ್ಲಿ ಸ್ಥಾಪಿಸುತ್ತಿರುವುದಕ್ಕೆ ನನಗೆ ಆತೀವ ಸಂತೋಷವಾಗಿದೆ. ಮ್ಯೂಸಿಯಮ್ನ ಮೇಣದ ಪ್ರತಿಮೆ ರಚನಾಕಾರ ಕಲಾವಿದರೊಂದಿಗೆ ನಡೆದ ಮಾತುಕತೆ ನನ್ನನ್ನು ಉಲ್ಲಸಿತಳನ್ನಾಗಿಸಿದೆ,” ಎಂದು ಅವರು ಹೇಳಿಕೊಂಡಿದ್ದಾರೆ.
ಲಂಡನ್ ಮೇಡಮ್ ಟುಸಾಡ್ಸ್ ಮ್ಯೂಸಿಯಂನಲ್ಲಿ ಕೆಲವೇ ಬಾಲಿವುಡ್ ತಾರೆಯರ ಪ್ರತಿಮೆಗಳನ್ನು ಮಾತ್ರ ಸ್ಥಾಪಿಸಲಾಗಿದೆ. ಸದ್ಯ ದೀಪಿಕಾ ಅವರು ಆ ಸಾಲಿಗೆ ಸೇರಲಿದ್ದಾರೆ.
ಮೇಡಮ್ ಟುಸಾಡ್ಸ್ ಮ್ಯೂಸಿಯಂನ ದೆಹಲಿ ಶಾಖೆಯಲ್ಲಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್, ಕರೀನ್ ಕಪೂರ್, ನಟರಾದ ಹೃತಿಕ್ ರೋಷನ್, ಶಾರೂಖ್ ಖಾನ್, ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಮೆಗಳಿವೆ.