ಎಐಬಿ ರೋಸ್ಟ್ ವಿವಾದ: ರಣವೀರ್ ಸಿಂಗ್, ಅರ್ಜುನ್ ಕಪೂರ್ ಗೆ ಮಧ್ಯಂತರ ತಡೆ ನೀಡಲು ಕೋರ್ಟ್ ನಕಾರ

ಹಿಂದಿಯ ಖ್ಯಾತ ಎಐಬಿ ನಾಕೌಟ್ ಹಾಸ್ಯ ಕಾರ್ಯಕ್ರಮದಲ್ಲಿ ಅಶ್ಲೀಲ ಮತ್ತು ನಿಂದನಕಾರಿ ಭಾಷೆ ...
ಎಐಬಿ ಕಾರ್ಯಕ್ರಮದಲ್ಲಿ ಅರ್ಜುನ್ ಕಪೂರ್ ಮತ್ತು ರಣವೀರ್ ಸಿಂಗ್
ಎಐಬಿ ಕಾರ್ಯಕ್ರಮದಲ್ಲಿ ಅರ್ಜುನ್ ಕಪೂರ್ ಮತ್ತು ರಣವೀರ್ ಸಿಂಗ್

ಮುಂಬೈ: ಹಿಂದಿಯ ಖ್ಯಾತ ಎಐಬಿ ನಾಕೌಟ್ ಹಾಸ್ಯ ಕಾರ್ಯಕ್ರಮದಲ್ಲಿ ಅಶ್ಲೀಲ ಮತ್ತು ನಿಂದನಕಾರಿ ಭಾಷೆ ಬಳಸಲಾಗಿತ್ತು ಎಂದು 2015ರಲ್ಲಿ ನಟರಾದ ರಣವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್ ಸೇರಿದಂತೆ 10 ಮಂದಿ ಸೆಲೆಬ್ರಿಟಿಗಳ ವಿರುದ್ಧ ದಾಖಲಿಸಲಾಗಿದ್ದ ಎಫ್ಐಆರ್ ಗೆ ಸಂಬಂಧಪಟ್ಟಂತೆ ಮಧ್ಯಂತರ ತಡೆಯಾಜ್ಞೆ ನೀಡಲು ಮುಂಬೈ ಹೈಕೋರ್ಟ್ ಇಂದು ನಿರಾಕರಿಸಿದೆ.

ನ್ಯಾಯಾಧೀಶರಾದ ಆರ್.ಎಂ.ಸಾವಂತ್ ಮತ್ತು ಸಾರಂಗ್ ಕೊಟ್ವಾಲ್ ಅವರನ್ನೊಳಗೊಂಡ ನ್ಯಾಯಪೀಠ ಈ ಇಬ್ಬರು ನಟರ ವಕೀಲರಿಗೆ ಆದೇಶ ನೀಡಿ ತಮ್ಮ ಮನವಿಯ ಪ್ರತಿಯೊಂದನ್ನು ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಸಂತೋಷ್ ದುಂಡ್ ಕರ್ ಅವರಿಗೆ ನೀಡುವಂತೆ ಸೂಚಿಸಿದ್ದಾರೆ.

ಪುಣೆ ಮತ್ತು ಮುಂಬೈ ಪೊಲೀಸರು ತಮ್ಮ ವಿರುದ್ಧ ಯಾವುದೇ ದಬ್ಬಾಳಿಕೆ ಕ್ರಮ ಕೈಗೊಳ್ಳುವುದನ್ನು ತಡೆಯಬೇಕೆಂದು ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಈ ಇಬ್ಬರು ನಟರು ಕೋರ್ಟ್ ಗೆ ಒತ್ತಾಯಿಸಿದ್ದರು.

ದೂರುದಾರರಿಗೆ ಮನವಿಯ ಪ್ರತಿಯೊಂದು ಸಿಕ್ಕಿದ ನಂತರವಷ್ಟೇ ನಟರ ಮನವಿಯನ್ನು ಪರಿಗಣಿಸುವುದಾಗಿ ಹೇಳಿದ ಮುಂಬೈ ಹೈಕೋರ್ಟ್ ವಿಚಾರಣೆಯನ್ನು ಏಪ್ರಿಲ್ 3ಕ್ಕೆ ಮುಂದೂಡಿದೆ.

2014, ಡಿಸೆಂಬರ್ 20ರಂದು ರಣವೀರ್ ಸಿಂಗ್, ಅರ್ಜುನ್ ಕಪೂರ್ ಸೇರಿದಂತೆ ದೀಪಿಕಾ ಪಡುಕೋಣೆ, ಕರಣ್ ಜೋಹರ್ ಮತ್ತು ಎಐಬಿ ತಂಡದ ಸದಸ್ಯರು ಮುಂಬೈಯ ವೊರ್ಲಿ ಪ್ರದೇಶದಲ್ಲಿ ಸಹಾಯಾರ್ಥ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟಿದ್ದರು. ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆಗಿದ್ದ ವಿಡಿಯೊ ಒಂದು ವರ್ಷದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

2015, ಫೆಬ್ರವರಿಯಲ್ಲಿ ದುಂಡ್ಕರ್  ಗುರುಗಾಂವ್ ಕೋರ್ಟ್ ನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ಶೋನಲ್ಲಿ ಅಶ್ಲೀಲ, ನಿಂದನಕಾರಿ, ಅಸಹ್ಯವಾಗಿ ತೋರಿಸಲಾಗಿತ್ತು ಎಂದು ಆರೋಪಿಸಿದ್ದರು. ಈ ಬಗ್ಗೆ ಆದೇಶ ನೀಡಿದ್ದ ಕೋರ್ಟ್ ಎಲ್ಲಾ 10 ಮಂದಿ ವಿರುದ್ಧ ಕೇಸು ದಾಖಲಿಸಲು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಪುಣೆ ಕೋರ್ಟ್ ನಲ್ಲಿ ಎಫ್ಆಆರ್ ದಾಖಲಾಗಿತ್ತು.

ಈ ವರ್ಷಾರಂಭದಲ್ಲಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಟರಾದ ರಣವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್ ಮುಂಬೈ ಹೈಕೋರ್ಟ್ ಮೊರೆ ಹೋಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com