'ನನ್ನೊಳಗಿನ ನಟ ರಾಜಕಾರಣಿಗಿಂತ ಹೆಚ್ಚು ಪ್ರಬಲ, ನನ್ನಲ್ಲಿ ಇನ್ನೂ ಸಾಕಷ್ಟು ಪ್ರತಿಭೆಯಿದೆ': ಅನುಪಮ್ ಖೇರ್

ಬಾಲಿವುಡ್ ನ ಪ್ರತಿಭಾವಂತ ಹಿರಿಯ ನಟ ಅನುಪಮ್ ಖೇರ್. ತಮ್ಮ ಪ್ರತಿಭೆಯನ್ನು ಸಾಗರದಾಚೆ ಚಾಚಿ ಹಾಲಿವುಡ್ ನಲ್ಲಿ ಕೂಡ ನಟಿಸಿದರು. ಸಿಲ್ವರ್ ಲೈನಿಂಗ್ ಪ್ಲೇಬುಕ್, ದ ಬಿಗ್ ಸಿಕ್, ಯು ವಿಲ್ ಮೀಟ್ ಎ ಟಾಲ್ ಡಾರ್ಕ್ ಸ್ಟ್ರೇಂಜರ್ಸ್ ಮೊದಲಾದ ಚಿತ್ರಗಳಲ್ಲಿ ನಟಿಸಿದರು. ಇದೀಗ ನ್ಯೂ ಅಮ್ಸ್ಟೆರ್ಡಾಮ್ ಎಂಬ ಜನಪ್ರಿಯ ಅಮೆರಿಕ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಅನುಪಮ್ ಖೇರ್
ಅನುಪಮ್ ಖೇರ್

ಬಾಲಿವುಡ್ ನ ಪ್ರತಿಭಾವಂತ ಹಿರಿಯ ನಟ ಅನುಪಮ್ ಖೇರ್. ತಮ್ಮ ಪ್ರತಿಭೆಯನ್ನು ಸಾಗರದಾಚೆ ಚಾಚಿ ಹಾಲಿವುಡ್ ನಲ್ಲಿ ಕೂಡ ನಟಿಸಿದರು. ಸಿಲ್ವರ್ ಲೈನಿಂಗ್ ಪ್ಲೇಬುಕ್, ದ ಬಿಗ್ ಸಿಕ್, ಯು ವಿಲ್ ಮೀಟ್ ಎ ಟಾಲ್ ಡಾರ್ಕ್ ಸ್ಟ್ರೇಂಜರ್ಸ್ ಮೊದಲಾದ ಚಿತ್ರಗಳಲ್ಲಿ ನಟಿಸಿದರು. ಇದೀಗ ನ್ಯೂ ಅಮ್ಸ್ಟೆರ್ಡಾಮ್ ಎಂಬ ಜನಪ್ರಿಯ ಅಮೆರಿಕ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸುತ್ತಿರುವ ವೆಬಿನಾರ್ ಸರಣಿ ಕಾರ್ಯಕ್ರಮದಲ್ಲಿ ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಮತ್ತು ಹಿರಿಯ ಪತ್ರಕರ್ತ ಕಾವೇರಿ ಬಮ್ಜೈ ಜೊತೆಗೆ ಮಾತನಾಡುತ್ತಾ ಹಾಲಿವುಡ್, ಬಾಲಿವುಡ್ ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಅಮೆರಿಕದ ಸರಣಿ ಚಿತ್ರ ನ್ಯೂ ಅಮ್ಸ್ಟೆರ್ಡಾಮ್ ನಲ್ಲಿ ಡಾ ವಿಜಯ್ ಕಪೂರ್ ಎಂಬ ಪ್ರಮುಖ ಪಾತ್ರವನ್ನು ಮಾಡುತ್ತಿರುವ ಅನುಪಮ್ ಖೇರ್ ಅದರಲ್ಲಿ ಮಾಡಿರುವ ಕೆಲಸದ ಬಗ್ಗೆ ಅನುಭವಗಳನ್ನು ಹಂಚಿಕೊಂಡರು.ಆ ಧಾರಾವಾಹಿಯ ಒಂದು ಕಂತು ಇಂದಿನ ಕೊರೋನಾ ವೈರಸ್ ಸೋಂಕಿಗೆ ಬಹಳ ಹತ್ತಿರವಾಗಿದೆ ಎಂದು ಮಾತನ್ನು ಆರಂಭಿಸಿದರು.

ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ವೈರಸ್ ನ್ನು ಜಾಗತಿಕ ಸೋಂಕು ಎಂದು ಘೋಷಣೆ ಮಾಡುವ ಮುನ್ನವೇ ನಾವು ಆ ಕಂತನ್ನು ಚಿತ್ರೀಕರಿಸಿದ್ದೆವು. ಆ ಕಂತು ನನಗೆ ತುಂಬಾ ಆಪ್ತವೆನಿಸಿತು. ಅದು ಧಾರಾವಾಹಿಯ 18ನೇ ಕಂತು ಇಂದಿನ ಕೊರೋನಾ ಸೋಂಕಿನ ಸ್ಥಿತಿಗತಿಗೆ ತೀರಾ ಹತ್ತಿರವಾಗಿದೆ. ನಂತರ ಕೊರೋನಾ ವೈರಸ್ ಜಾಗತಿಕ ಸೋಂಕು ಎಂದು ಘೋಷಣೆಯಾಗಿ ಲಾಕ್ ಡೌನ್ ಹೇರಿಕೆಯಾಯಿತು. ನಾವು ಶೂಟಿಂಗ್ ನ್ನು ಸ್ಥಗಿತಗೊಳಿಸಬೇಕಾಯಿತು. ನಂತರ ನಾನು ಭಾರತಕ್ಕೆ ಬಂದ ನಂತರ 18ನೇ ಕಂತು ಸೋಂಕಿಗೆ ತೀರಾ ಹತ್ತಿರವಾಗಿರುವುದರಿಂದ ಅದನ್ನು ಪ್ರಸಾರ ಮಾಡುವುದಿಲ್ಲ ಎಂದು ನಿರ್ಮಾಪಕರು, ನಿರ್ದೇಶಕರು ತಿಳಿಸಿದರು. ಸೋಂಕಿನ ಸಮಯದಲ್ಲಿ ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ನಾವು ಹೀಗೆ ಮಾಡಿದ್ದೇವೆ ಎಂದು ಜನ ಭಾವಿಸಬಾರದು ಎಂದು ಪ್ರಸಾರ ಮಾಡದಿದ್ದುದು ಖುಷಿಯಾಯಿತು ಎಂದರು ಖೇರ್.

ಅಮೆರಿಕದ ಬೀದಿಗಳಲ್ಲಿ ಭಾರತೀಯ ನಟನಾಗಿ ನನ್ನನ್ನು ಗುರುತು ಹಿಡಿಯುವುದು ಖುಷಿ ಕೊಡುತ್ತದೆ. ಧಾರಾವಾಹಿಯಲ್ಲಿ ಬರುವ ಡಾ ಕಪೂರ್ ನಂತಹ ವೃತ್ತಿಪರ ವೈದ್ಯನಾಗಬೇಕೆಂದು ಬಯಸುತ್ತೇವೆ ಎಂದು ಅನೇಕ ಅಮೆರಿಕನ್ನರು ನನಗೆ ಹೇಳಿದ್ದಾರೆ. ಅಲ್ಲಿರುವ ಭಾರತೀಯರಿಗೆ ನನ್ನ ಬಗ್ಗೆ ಅಪಾರ ಗೌರವವಿದೆ. ನಮ್ಮ ಸಂಸ್ಕೃತಿ ಬಗ್ಗೆ ಅವರಿಗೆ ಅರಿವಿದೆ. ಅವರ ಮನೆಮನೆಗಳಲ್ಲಿ ನಾನು ಗುರುತಿಸಿಕೊಂಡಿದ್ದು ನನಗೆ ಬಹಳ ಖುಷಿ ಕೊಟ್ಟಿದೆ ಎಂದರು.

ಭಾರತದಲ್ಲಿ ಬಾಲಿವುಡ್ ನಲ್ಲಿ ಅವಕಾಶವಿದ್ದರೂ ಅಮೆರಿಕಕ್ಕೆ ಏಕೆ ಹೋದಿರಿ ಎಂದು ಕೇಳಿದಾಗ, ಹಿರಿಯ ಕಲಾವಿದ ಎಂಬ ಹಣೆಪಟ್ಟಿ ನನ್ನನ್ನು ಜಾಗೃತನನ್ನಾಗಿಸಿದೆ. ನನ್ನಲ್ಲಿ ಸಾಕಷ್ಟು ಪ್ರತಿಭೆ ಇದ್ದು ಹೊರಹಾಕಲು ಬಾಕಿ ಉಳಿದಿದೆ. ನನ್ನನ್ನು ನಾನು ಮರುಶೋಧಿಸಬೇಕಾಗಿತ್ತು. ಅಲ್ಲಿ ಹೋದರೆ ನನಗೆ ಅನುಪಮ್ ಖೇರ್ ಎಂಬ ಹೊರೆ ಇಲ್ಲ, ಅಮೆರಿಕದಲ್ಲಿ ನಾನು ಹೊಸಬ, ಹೀಗಾಗಿ ನನ್ನೊಳಗಿನ ಶಕ್ತಿ, ಪ್ರತಿಭೆಯನ್ನು ಹೊರಹಾಕಲು ನನಗೆ ಉತ್ತಮ ವೇದಿಕೆ ಎನಿಸಿತು ಎಂದರು.

ಚಿತ್ರೋದ್ಯಮದ 70 ಮಂದಿ ಮೋದಿಯವರು ಪ್ರಧಾನಿಯಾಗಬಾರದು ಎಂದು ಸಹಿ ಮಾಡಿ ಪತ್ರ ಬರೆದಾಗಲೇ ಚಿತ್ರೋದ್ಯಮದಲ್ಲಿ ವಿಭಜನೆ ಎಂಬುದು ಆರಂಭವಾಯಿತು ಎನ್ನುವ ಅನುಪಮ್ ಖೇರ್ ಗೆ ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದು ಸದ್ಯಕ್ಕೆ ಆಸಕ್ತಿಯಿಲ್ಲವಂತೆ. ಬಿಜೆಪಿ ಸೇರಿದಂತೆ ಹಲವು ಪಕ್ಷಗಳಿಂದ ಅವಕಾಶಗಳು ಬಂದಿವೆ. ಆದರೆ ಸದ್ಯಕ್ಕೆ ಈಗ ಸತ್ಯದ ಪರ ಧ್ವನಿಯಾಗಿ ನಿಲ್ಲುತ್ತೇನೆ. ಒಂದು ಬಾರಿ ಪಕ್ಷದ ಸದಸ್ಯನಾಗಿ ನೇಮಕಗೊಂಡ ಮೇಲೆ ಅದರ ವಕ್ತಾರನಾಗುತ್ತೇನೆ, ರಾಜಕಾರಣಿಗಿಂತ ನನ್ನೊಳಗಿರುವ ನಟ ಹೆಚ್ಚು ಪ್ರಾಬಲ್ಯ ಹೊಂದಿದ್ದಾನೆ ಎಂದು ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com