ಮುಂಬೈ: ಅಶ್ಲೀಲ ಚಿತ್ರ ಪ್ರಕರಣದಲ್ಲಿ ಬಂಧನಕ್ಕೀಡಾಗಿ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಉದ್ಯಮಿ ರಾಜ್ ಕುಂದ್ರಾ ಮತ್ತು ಅವರ ಪತ್ನಿ ನಟಿ ಶಿಲ್ಪಾಶೆಟ್ಟಿ ವಿರುದ್ಧ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಶೆರ್ಲಿನ್ ಚೋಪ್ರಾ, 'ರಾಜ್ ಕುಂದ್ರಾ ನನಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ಇಂದು ತಾವು ದೂರು ದಾಖಲಿಸಿದ್ದು, ಪೊಲೀಸರು ಎಫ್‌ಐಆರ್ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ರಾಜ್ ಕುಂದ್ರಾ ಮಾತ್ರವಲ್ಲದೆ ಶೆರ್ಲಿನ್ ನಟಿ ಶಿಲ್ಪಾಶೆಟ್ಟಿ ವಿರುದ್ಧವೂ ದೂರು ದಾಖಲಿಸಿದ್ದು, ಶಿಲ್ಪಾಳಿಂದ ನಾನು ನಿರಂತರ ಮಾನಸಿಕ ಕಿರುಕುಳ ಅನುಭವಿಸಿದ್ದೇನೆ. ಆಕೆಯ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.
2019ರಲ್ಲಿ ರಾಜ್ ಕುಂದ್ರಾ ನನ್ನ ಮ್ಯಾನೇಜರ್ ರನ್ನು ಸಂಪರ್ಕಿಸಿ ಆ್ಯಪ್ ಬ್ಯುಸಿನೆಸ್ ಮಾಡುವ ಪ್ರಸ್ತಾಪ ಮಾಡಿದ್ದರು. ನನಗೆ ಆ ವ್ಯವಹಾರದ ಬಗ್ಗೆ ಇಷ್ಟವಿರಲಿಲ್ಲ, ಹಾಗಾಗಿ ಅದನ್ನು ತಿರಸ್ಕರಿಸಿದ್ದೆ. ಒಂದು ದಿನ ರಾಜ್ ಕುಂದ್ರಾ ನನ್ನ ಅನುಮತಿ ಇಲ್ಲದೇ ಮನೆಗೆ ಬಂದಿದ್ದರು. ಆ ವ್ಯವಹಾರ ಬಗ್ಗೆ ಮತ್ತೆ ಪ್ರಸ್ತಾಪ ಮಾಡಿದರು. ಈ ವೇಳೆ ಇಬ್ಬರ ನಡುವೆ ಮಾತು ಬೆಳೆದಿತ್ತು. ನಂತರ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ನಾನು ಈ ವಿಚಾರವಾಗಿ ಬಹಿರಂಗವಾಗಿ ಮಾತನಾಡಿದ ನಂತರ, ಶಿಲ್ಪಾ ಶೆಟ್ಟಿ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಅವರ ಮೇಲೆ ನಟಿ ಶೆರ್ಲಿನ್ ಚೋಪ್ರಾ ಆರೋಪ ಮಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಹಲವು ಬಾರಿ ಶೆರ್ಲಿನ್ ಮಾಧ್ಯಮಗಳಲ್ಲಿ ಇಂತಹ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದರು. ಈ ಬಾರಿ ಪೊಲೀಸ್ ಠಾಣೆಗೂ ಹೋಗಿ ದೂರು ನೀಡಿದ್ದಾರೆ.
ಇನ್ನು ಅಶ್ಲೀಲ ಚಿತ್ರ ಪ್ರಕರಣದಲ್ಲಿ ನಟಿ ಶೆರ್ಲಿನ್ ಚೋಪ್ರಾ ಹೆಸರೂ ಕೂಡ ಇದ್ದು, ಈಗಾಗಲೇ ಅವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.
Advertisement