'ಹಮ್ ಆಪ್ಕೆ ಹೈ ಕೌನ್' ಚಿತ್ರದ ಸಂಗೀತ ನಿರ್ದೇಶಕ ರಾಮಲಕ್ಷ್ಮಣ್ ನಿಧನ

ಬಾಲಿವುಡ್ ನ ಹಿರಿಯ ಸಂಗೀತ ನಿರ್ದೇಶಕ, ರಾಜಶ್ರೀ ಪ್ರೊಡಕ್ಷನ್ಸ್‌ನ ಬ್ಲಾಕ್ ಬಸ್ಟರ್ ಚಲನಚಿತ್ರಗಳಾದ 'ಮೈನೆ ಪ್ಯಾರ್ ಕಿಯಾ', 'ಹಮ್ ಆಪ್ಕೆ ಹೈ ಕೌನ್' ಮತ್ತು 'ಹಮ್ ಸಾಥ್ ಸಾಥ್ ಹೈ' ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ರಾಮಲಕ್ಷ್ಮಣ್ ಅವರು 78ರ ಹರೆಯದಲ್ಲಿ ವಿಧಿವಶರಾಗಿದ್ದಾರೆ.
ರಾಮಲಕ್ಷ್ಮಣ್
ರಾಮಲಕ್ಷ್ಮಣ್

ಮುಂಬೈ: ಬಾಲಿವುಡ್ ನ ಹಿರಿಯ ಸಂಗೀತ ನಿರ್ದೇಶಕ ರಾಮಲಕ್ಷ್ಮಣ್ ನಿಧನರಾಗಿದ್ದಾರೆ. 

ರಾಜಶ್ರೀ ಪ್ರೊಡಕ್ಷನ್ಸ್‌ನ ಬ್ಲಾಕ್ ಬಸ್ಟರ್ ಚಲನಚಿತ್ರಗಳಾದ 'ಮೈನೆ ಪ್ಯಾರ್ ಕಿಯಾ', 'ಹಮ್ ಆಪ್ಕೆ ಹೈ ಕೌನ್' ಮತ್ತು 'ಹಮ್ ಸಾಥ್ ಸಾಥ್ ಹೈ' ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ರಾಮಲಕ್ಷ್ಮಣ್ ಅವರು 78ರ ಹರೆಯದಲ್ಲಿ ವಿಧಿವಶರಾಗಿದ್ದಾರೆ. ರಾಮಲಕ್ಷ್ಮಣ್ ರ ಮೂಲ ಹೆಸರು ವಿಜಯ್ ಪಾಟೀಲ್. ಇಂದು ಮುಂಜಾನೆ ನಾಗ್ಪುರದ ಅವರ ನಿವಾಸದಲ್ಲಿ ನಿಧನರಾದರು ಎಂದು ಅವರ ಪುತ್ರ ಅಮರ್ ತಿಳಿಸಿದ್ದಾರೆ.

ರಾಮಲಕ್ಷ್ಮಣ್ ಅವರು ಆರು ದಿನಗಳ ಹಿಂದೆ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡಿದ್ದರು. ಆ ಸಮಯದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಮನೆಗೆ ಬಂದ ಮೇಲೆ ಸ್ವಲ್ಪ ಬಳಲಿದಂತೆ ಕಾಣುತ್ತಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರು ಮನೆಗೆ ಬಂದು ಚಿಕಿತ್ಸೆ ನೀಡುತ್ತಿದ್ದರು. ಆದರೆ ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಅಮರ್ ಪಿಟಿಐಗೆ ತಿಳಿಸಿದ್ದಾರೆ.

ವಿಜಯ್ ಪಾಟೀಲ್ ಅವರು ಸಹಯೋಗಿ ರಾಮ್ ಹೆಸರಿನ ಸುರೇಂದ್ರ ಜೊತೆ ಲಕ್ಷ್ಮಣ್ ಆಗಿ 1975ರಲ್ಲಿ ಸಂಗೀತ ಸಂಯೋಜನೆ ಪ್ರಾರಂಭಿಸಿದರು. ಆದರೆ ದುರದೃಷ್ಟವಶಾತ್ ಸುರೇಂದ್ರ ಅವರು 1976ರಲ್ಲಿ ನಿಧನರಾಗಿದ್ದು ಮುಂದೆ ವಿಜಯ್ ಅವರು ರಾಮಲಕ್ಷ್ಮಣ್ ಹೆಸರಿನ ಮೂಲಕವೇ ಸಂಗೀತ ಯಾತ್ರೆ ಮುಂದುವರೆಸಿದರು. 

ನಾಲ್ಕು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ, ಹಿಂದಿ, ಮರಾಠಿ ಮತ್ತು ಭೋಜ್‌ಪುರಿಯಲ್ಲಿ 150ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅಲ್ಲದೆ ಖ್ಯಾತ ನಿರ್ದೇಶಕರಾದ ಮನಮೋಹನ್ ದೇಸಾಯಿ, ಮಹೇಶ್ ಭಟ್, ಜಿ.ಪಿ. ಸಿಪ್ಪಿ, ಅನಿಲ್ ಗಂಗೂಲಿ ಮತ್ತು ಸೂರಜ್ ಬರ್ಜಾತ್ಯ ಅವರೊಂದಿಗೆ ಕೆಲಸ ಮಾಡಿದರು.

'ಏಜೆಂಟ್ ವಿನೋದ್', '100 ಡೇಸ್', 'ಅನ್ಮೋಲ್', 'ತಾರಾನಾ', 'ಪತ್ತರ್ ಕೆ ಫೂಲ್' ಮತ್ತು 'ಹಮ್ ಸೆ ಬಾದ್ಕರ್ ಕೌನ್' ಅವರ ಇತರ ಸ್ಮರಣೀಯ ಚಿತ್ರಗಳು.

ಲತಾ ಮಂಗೇಶ್ಕರ್ ಸಂತಾಪ
ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ರಾಮ್ ಲಕ್ಷ್ಮಣ್ ನಿಧನಕ್ಕೆ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಸೇರಿದಂತೆ ಬಾಲಿವುಡ್ ನ ಅನೇಕ ಮಂದಿ ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ಮಾಡಿರುವ ಲತಾ ಮಂಗೇಶ್ಕರ್, 'ಅತ್ಯಂತ ಪ್ರತಿಭಾವಂತ ಮತ್ತು ಜನಪ್ರಿಯ ಸಂಗೀತ ನಿರ್ದೇಶಕ ರಾಮ್ ಲಕ್ಷ್ಮಣ್ ಅವರು ನಿಧನರಾಗಿದ್ದಾರೆ ಎಂದು ತಿಳಿಯಿತು. ಈ ಸುದ್ದಿ ಕೇಳಿ ನನಗೆ ತುಂಬಾ ತೀವ್ರ ನೋವಾಯಿತು. ಅವರು ಮಹಾನ್ ವ್ಯಕ್ತಿ. ನಾನು ಅವರು ನಿರ್ದೇಶನದ ಅನೇಕ ಹಾಡುಗಳನ್ನು ಹಾಡಿದ್ದೇನೆ, ತುಂಬಾ ಜನಪ್ರಿಯತೆ ತಂದುಕೊಟ್ಟಿದೆ' ಎಂದು ಹೇಳಿದ್ದಾರೆ. ರಾಮ್ ಲಕ್ಷ್ಮಣ್ ನಿರ್ದೇಶನದ ಸಂಗೀತದಲ್ಲಿ ಲತಾ ಮಂಗೇಶ್ಕರ್ 'ಮಾಯೆ ನಿ ಮಾಯೆ.' .'ದೀದಿ ತೇರಾ ದೇವರ್ ದಿವಾನಾ' 'ಕಬೂತಾರ್ ಜಾ ಜಾ ಜಾ..ಸೇರಿದಂತೆ ಇನ್ನು ಅನೇಕ ಜನಪ್ರಿಯ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ನಟ ಸಲ್ಮಾನ್ ಖಾನ್, “ನನ್ನ ಯಶಸ್ವಿ ಚಿತ್ರಗಳಾದ ಮೈನೆ ಪ್ಯಾರ್ ಕಿಯಾ, ಪತ್ತರ್ ಕೆ ಫೂಲ್, ಹಮ್ ಸಾಥ್ ಸಾಥ್ ಹೈ, ಹಮ್ ಆಪ್ಕೆ ಹೈನ್ ಕೌನ್ ಅವರ ಸಂಗೀತ ನಿರ್ದೇಶಕ ರಾಮ್ ಲಕ್ಷ್ಮಣ್ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದುಃಖಿತ ಕುಟುಂಬಕ್ಕೆ ಸಂತಾಪ, ”ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com